ಕಾಲಿಲ್ಲದವ ಐಎಎಸ್ ಆಗಬಹುದು, ನೀವು ಹೆಲ್ಪ್ ಮಾಡಿ
ಅಥಣಿ, ಮೇ 9: ವಿಕಲಾಂಗ ವಿದ್ಯಾರ್ಥಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲಿನಲ್ಲಿ ಬರೆದು, ಶೇ. 69 ರಷ್ಟು ಅಂಕ ಗಳಿಸಿ, ಅದ್ವಿತೀಯ ಸಾಧನೆ ಮಾಡಿದ್ದಾನೆ. ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಜೂರು ಗ್ರಾಮದ ಹನುಮಾನ ಬಬನ ಹೊನಖಾಂಡೆ ಎಡಗಾಲಿನಲ್ಲಿ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾನೆ. ಇತರೆ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾನೆ.
ತನ್ನ ಊರಿನಿಂದ 90 ಕಿಮೀ ದೂರದಲ್ಲಿರುವ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪಪೂ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಹನುಮಾನ ಬಬನ ಕನ್ನಡದಲ್ಲಿ 50, ಇಂಗ್ಲಿಷ್ 54, ಇತಿಹಾಸ 72, ಅರ್ಥಶಾಸ್ತ್ರ 76, ವ್ಯವಹಾರ ಅಧ್ಯಯನ 95, ಲೆಕ್ಕಶಾಸ್ತ್ರದಲ್ಲಿ 65 ಅಂಕ ಪಡೆದಿದ್ದಾನೆ. ಅಲ್ಲಿ ಹಾಸ್ಟೆಲಿನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. (ರಾಯಚೂರಿನ ಹುಡುಗ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ)
ಬಡತನವೇ ಈತನ ಭಾಗ್ಯ:
ವಿಕಲಾಂಗ ಹನುಮಾನ ಬಬನಗೆ ಮತ್ತೊಂದು ವೈಶಿಷ್ಯವೂ ಇದೆ. ಅದುವೇ ಬಡತನ. ಈತನ ಅಪ್ಪ ಹೊನಖಾಂಡೆ -ಅಮ್ಮ ಸಂಗೀತಾ ಕೃಷಿ ಕಾರ್ಮಿಕರು. ದಂಪತಿಯ 7 ಮಕ್ಕಳ ಪೈಕಿ ಹನುಮಾನ ಬಬನ ಹಿರಿಯ ಪುತ್ರ. ಶೈಕ್ಷಣಿಕ ಹಿನ್ನೆಲೆ ಇಲ್ಲದ ಕುಟುಂಬ ಈತನದು. ಜತೆಗೆ ಗ್ರಾಮೀಣ ಭಾಗದವ. ಇಷ್ಟೆಲ್ಲಾ ಅನಾನುಕೂಲತೆಗಳೇ ಈತನ ಓದಿಗೆ ಶ್ರೀರಕ್ಷೆಯಾಗಿ ವಿಶಿಷ್ಟ ಸಾಧನೆ ಮಾಡಲು ಸಾಧ್ಯವಾಗಿದೆ. ಇಂತಿಪ್ಪ ಹನುಮಾನ ಬಬನ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶೇ. 63.40 ಅಂಕ ಗಳಿಸಿದ್ದ ಎಂಬುದು ಗಮನಾರ್ಹ.
ಸೋ, ಎಸ್ಸೆಸ್ಸೆಲ್ಟಿ ಶೇ. 64, ಪಿಯುಸಿ ಶೇ. 70 ಅಂದರೆ ಹನುಮಾನ ಬಬನನ ವಿದ್ಯಾರ್ಜನೆ ಏರುಗತಿಯಲ್ಲೇ ಇದೆ. ಹಾಗಾಗಿ ಆತ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಾನೆ. (ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ವೆಂಕಟೇಶ್ ಕಾಮತ್)
'ಕಾಲಿಲ್ಲದ ನನ್ನನ್ನು ಕೆಲವರು ಹಿಯಾಳಿಸುತ್ತಾರೆ. ಆದರೆ ನಾನು ಅತ್ತ ಗಮನ ಹರಿಸುವುದಿಲ್ಲ. ಕಷ್ಟಪಟ್ಟು ಓದ್ತೀನಿ. ಕಾಲಿನಿಂದಲೇ ಪರೀಕ್ಷೆ ಬರೆದು ಈಗ ಒಳ್ಳೆಯ ಅಂಕ ಗಳಿಸಿದ್ದೇನೆ. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬುದು ನನ್ನ ಕನಸು' ಅನ್ನುತ್ತಾನೆ ಹನುಮಾನ ಬಬನ. ಆತನಲ್ಲಿರುವ ಆತ್ಮವಿಶ್ವಾಸ ಕಿಚ್ಚು, ಉತ್ಸಾಹವನ್ನು ಕಂಡರೆ ಸಹೃದಯಿಗಳಿಗೆ ಖಂಡಿತಾ ಈತನಿಗೆ ನೆರವಾಗೋಣ ಅನ್ನಿಸದೇ ಇರದು.
ಸೋ, ತಡವೇಕೆ? ಬಡತನವನ್ನೇ ಹಾಸುಹೊದ್ದಿರುವ ಹನುಮಾನ ಬಬನಗೆ ನೆರವಾಗಿ. ಈತನಿಗೆ ಸಹಾಯ ಮಾಡಬಯಸುವವರು Hanuman Honakhande, SBI bank, Athani branch, Account no. 33661 741942 ಇಲ್ಲಿಗೆ ಹಣ ಸಂದಾಯ ಮಾಡಬಹುದು. ಮೊಬೈಲ್ ಸಂಖ್ಯೆ 9900 301261 ಅಥವಾ 96631 19877 ಮೂಲಕವೂ ಸಂಪರ್ಕಿಸಬಹುದು.












Click it and Unblock the Notifications