E Khata: ಬೆಳಗಾವಿ ಪಾಲಿಕೆ: ಬೃಹತ್ ಇ-ಖಾತಾ ಮೇಳ ಫೆ.24 ರಿಂದ
ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಬಿ - ಖಾತಾ ಹಾಗೂ ಇ - ಖಾತಾ ನೀಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡಿದ್ದು. ಆಸ್ತಿದಾರರಿಗೆ ಕೂಡಲೇ ಹಾಗೂ ಸಾಧ್ಯವಾದಷ್ಟು ಬೇಗ ಖಾತಾ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಖಾತಾ ಮೇಳ ಹಾಗೂ ಖಾತಾ ನೀಡುವುದಕ್ಕೆ ವಿಶೇಷ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಸಹ ಆಸ್ತಿದಾರರಿಗೆ ಬಿಗ್ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಆಸ್ತಿದಾರರಿಗೆ ಬೆಳಗಾವಿ ಪಾಲಿಕೆ ಕೊಟ್ಟಿರುವ ಗುಡ್‌ನ್ಯೂಸ್ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಫೆಬ್ರವರಿ 24ರಿಂದ ಇಲ್ಲಿನ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೃಹತ್ ಇ-ಖಾತಾ ಮೇಳ ಆಯೋಜಿಸಲಾಗಿದೆ. ಎಲ್ಲಾ ಆಸ್ತಿದಾರರು ಕನಿಷ್ಠ ದಾಖಲೆಗಳನ್ನು ಸಲ್ಲಿಸುವ ಮೂಲಕ ಎ ಮತ್ತು ಬಿ ಖಾತ ಪಡೆದುಕೊಳ್ಳಬೇಕು. ಮುಂದುವರಿದು ಇ - ಖಾತಾ ಸಹ ಸಿಗಲಿದೆ ಎಂದು ಬೆಳಗಾವಿ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದಿಂದ ಫೆಬ್ರುವರಿ 17ರಂದು ಇ-ಆಸಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಪ್ರಮಾಣಿಕ

ಕಾರ್ಯವಿಧಾನ (SOP)ನ್ನು ಹೊರಡಿಸಿದ್ದಾರೆ. ಇದರಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಾಕಿ ಇರುವ ಎಲ್ಲಾ ಆಸ್ತಿಗಳಿಗೆ 3 ತಿಂಗಳೊಳಗಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
"ಎ" ರಿಜಿಸ್ಟರ್‌ನಲ್ಲಿ / ಎ ಖಾತಾಗೆ ದಾಖಲಿರುವ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆಗಳು:
* ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕು ಪತ್ರ.
* ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಡೀಕೃತ ಪ್ರತಿ ಮತ್ತು ನಿವೇಶನಗಳು ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ ಹಾಗೂ ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು.
"ಬಿ"ರಿಜಿಸ್ಟರ್‌ನಲ್ಲಿ / ಬಿ ಖಾತಾದಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆಗಳು:
ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ 10.03.2024 ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು.
ಸಾರ್ವಜನಿಕರುಈ ಬೃಹತ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ. ಶುಭ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇನ್ನು ರಾಜ್ಯದಾದ್ಯಂತ ಇ - ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ವಿವಿಧ ಮಹಾನಗರ ಪಾಲಿಕೆಗಳು ಸಹ ಇ - ಖಾತಾ ಮೇಳವನ್ನು ಆಯೋಜಿಸುತ್ತಿವೆ.












Click it and Unblock the Notifications