ಬ್ರಾಹ್ಮಣ ಸಮುದಾಯದ ವಿರುದ್ಧ ವೃಥಾ ನಿಂದನೆ, ಕ್ರಮಕ್ಕೆ ಒತ್ತಾಯ
ಬೆಳಗಾವಿ, ಜನವರಿ 30: ಸಂವಿಧಾನದ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ನೀಡಿದ ಹೇಳಿಕೆ ವೈಯಕ್ತಿಕವಾದದ್ದು. ಆ ಬಗ್ಗೆ ಟೀಕೆ -ಟಿಪ್ಪಣಿ ಇದ್ದರೆ ಅವರ ಬಗ್ಗೆ ಮಾಡಬೇಕೇ ವಿನಾ ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿ ಇಲ್ಲಿನ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬ್ರಾಹ್ಮಣ ಸಮುದಾಯವನ್ನು ಸಲ್ಲದ ಕಾರಣಕ್ಕೆ ನಿಂದಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬ್ರಾಹ್ಮಣ ಸಮಾಜವನ್ನು ವೃಥಾ ನಿಂದಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಆಗ್ರಹ ಪಡಿಸಲಾಯಿತು.

ಸಂವಿಧಾನ ಬದಲಾವಣೆಗಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅದು ಈಗಾಗಲೇ ಸಾಕಷ್ಟು ಬಾರಿ ಬದಲಾವಣೆ ಆಗಿದೆ ಎಂದು ಅನಂತಕುಮಾರ್ ಹೆಗಡೆ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಆ ನಂತರ ಅದಕ್ಕಾಗಿ ಸಂಸತ್ ನಲ್ಲಿ ಕ್ಷಮೆ ಕೂಡ ಕೇಳಿದ್ದರು. ಆದರೆ ಈ ಹೇಳಿಕೆ ವಿಚಾರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವಂತೆ ಟೀಕೆ ಮಾಡಲಾಗುತ್ತಿದೆ ಎಂಬುದು ಪ್ರತಿಭಟನಾನಿರತರ ಆಕ್ರೋಶ ಆಗಿತ್ತು.












Click it and Unblock the Notifications