ಬೈಲಹೊಂಗಲದ ಬಳಿ ಬಲೂನಿನಂತ ವಸ್ತು ಗೋಚರ, ಆತಂಕ
ಇದೇ ಮಾದರಿ ಬಲೂನ್ ಅಮೆರಿಕದಲ್ಲಿ ಸುದ್ದಿ ಮಾಡಿದ್ದ ಸ್ಪೈ ಬಲೂನ್‌ನಂತೆ ಇರಬಹುದೇ ಎಂಬ ಆತಂಕ ವ್ಯಕ್ತವಾಗಿದೆ.
ಬೆಳಗಾವಿ, ಮಾರ್ಚ್ 9: ಬೈಲಹೊಂಗಲ ತಾಲೂಕಿನ ಗಡ್ಡಿಕರ್ವಿನಕೊಪ್ಪ ಗ್ರಾಮದಲ್ಲಿ ಗುರುವಾರ ರೈತರೊಬ್ಬರ ಕೃಷಿ ಜಮೀನಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಿರುವ ದೊಡ್ಡ ಬಲೂನ್‌ನಂತಹ ಅಪರಿಚಿತ ವಸ್ತು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಈ ಬಲೂನ್ ಇಲೆಕ್ಟ್ರಾನಿಕ್ ವಸ್ತುಗಳ ಒಳಗೊಂಡ ಬಲೂನಿನಂತೆ ಕಾಣಿಸಿಕೊಂಡಿದ್ದು, ಯಾವ ದಿಕ್ಕಿನಿಂದ ಬಂದು ಬಿದ್ದಿದೆ ಎಂಬುದು ಗೊತ್ತಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ವಿದ್ಯುನ್ಮಾನ ಯಂತ್ರಗಳೂ ಇದಕ್ಕೆ ಸಂಪರ್ಕಗೊಂಡಿರುವುದು ಕಂಡುಬಂದಿದ್ದರಿಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಲೂನಿನಂತಿದ್ದ ವಸ್ತುವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಲೂನ್ ಅಮೆರಿಕದಲ್ಲಿ ಸುದ್ದಿ ಮಾಡಿದ್ದ ಸ್ಪೈ ಬಲೂನ್ ನಂತೆ ಇರಬಹುದೇ ಎಂಬ ಆತಂಕ ವ್ಯಕ್ತವಾಗಿದೆ. ಬಲೂನ್ ಸುದ್ದಿ ತಿಳಿಯುತ್ತಿದ್ದಂತೆಯೇ ಕುತೂಹಲದಿಂದ ಗ್ರಾಮಸ್ಥರು ಸ್ಥಳಕ್ಕೆ ಬಂದು ವೀಕ್ಷಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್, ಬಲೂನ್‌ನಲ್ಲಿ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲಾಗಿದ್ದು, ಅದನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.











Click it and Unblock the Notifications