ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು 'ಮಿಷನ್ 12' ತಂತ್ರ!
ಬೆಳಗಾವಿ, ನವೆಂಬರ್ 30 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಗಡಿನಾಡು ಬೆಳಗಾವಿಯಲ್ಲಿ ಚುನಾವಣೆಗೆ ತಯಾರಿ ಜೋರಾಗಿದೆ. 'ಮಿಷನ್ 12' ಹೆಸರಿನಲ್ಲಿ ಕಾಂಗ್ರೆಸ್ ಗೆಲ್ಲಿಸಲು ರಮೇಶ ಜಾರಕಿಹೊಳಿ ತಂತ್ರ ರೂಪಿಸುತ್ತಿದ್ದಾರೆ.
18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಕ್ಷೇತ್ರ ಬೆಳಗಾವಿ ಜಿಲ್ಲೆ. ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಇದೇ ಜಿಲ್ಲೆಯವರು.
2018ರ ಚುನಾವಣೆಗೆ ರಮೇಶ ಜಾರಕಿಹೊಳಿ ಅವರು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಜಿಲ್ಲೆಯ 18 ಕ್ಷೇತ್ರಗಳ ಪೈಕಿ 12ರಲ್ಲಿ ಗೆಲುವು ಸಾಧಿಸಲು, 'ಮಿಷನ್ 12' ಎಂಬ ಹೆಸರಿನಲ್ಲಿ ತಂತ್ರ ರೂಪಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ.
ರಮೇಶ ಜಾರಕಿಹೊಳಿ ಅವರು ಯಾವ-ಯಾವ ಕ್ಷೇತ್ರದಲ್ಲಿ ಗೆಲ್ಲಲು ಯಾವ ಯೋಜನೆ ರೂಪಿಸಿದ್ದಾರೆ?. ಯಾರು ಕಾಂಗ್ರೆಸ್ ಪಕ್ಷ ಸೇರುತ್ತಾರೆ? ಎನ್ನುವುದು ಈಗ ಕುತೂಹಲದ ಪ್ರಶ್ನೆಯಾಗಿದೆ.

ಜಾರಕಿಹೊಳಿ ಅವರ ತಂತ್ರ ಯಶಸ್ವಿ
ಕಳೆದ ವಿಧಾಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಜೆಡಿಎಸ್ ಪಕ್ಷದ ಪ್ರಭಾವಿ ಅಭ್ಯರ್ಥಿ ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಮೇಶ ಜಾರಕಿಹೊಳಿ ಅವರು ಯಶಸ್ವಿಯಾಗಿದ್ದಾರೆ.

ಬೈಲಹೊಂಗಲ ಕ್ಷೇತ್ರ
ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಜಗದೀಶ್ ಮೆಟಗುಡ್ ಅವರನ್ನು ಕೈ ಪಾಳೆಯಕ್ಕೆ ಸೆಳೆಯಲು ಈಗಾಗಲೇ ಪ್ರಯತ್ನ ನಡೆಸಲಾಗಿದೆ. ಜಗದೀಶ ಮೆಟಗುಡ್ ಬಿಜೆಪಿ ಟಿಕೆಟ್ ಸಿಗದಿದ್ದರೆ 'ಕೈ' ಹಿಡಿಯೋಣ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈಶ್ವರಪ್ಪ ಬಣದಲ್ಲಿ ಗುರುತಿಸಿ ಕೊಂಡಿರುವ ಜಗದೀಶ್ ಮೆಟಗುಡ್ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಕಿತ್ತೂರು ಗೆಲ್ಲುವ ತಂತ್ರ
ಕಿತ್ತೂರು ವಿಧಾಸಭಾ ಕ್ಷೇತ್ರದಿಂದ ಡಿ.ಬಿ.ಇನಾಮದಾರ ಸಂಬಂಧಿ ಬಾಬಾಸಾಹೇಬ್ ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಯೋಜನೆ ರೂಪಿಸಿದ್ದಾರೆ. ಆದರೆ, ಬಾಬಾಸಾಹೇಬ್ ಪಾಟೀಲ್ ರನ್ನು ಎದುರಿಸಿ ಪುನಃ ಟಿಕೆಟ್ ಪಡೆದು ಮತ್ತೆ ಗೆದ್ದು ಬರಲು ಡಿ.ಬಿ. ಇನಾಮದಾರ ಕಿತ್ತೂರ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಓಡಾಡುತ್ತಿದ್ದಾರೆ.

ಅಂಜಲಿ ನಿಂಬಾಳ್ಕರ್
ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಿಸಲು ಮಾಜಿ ಸಚಿವ ಸತೀಶ ಜಾರಕಿಹೊಳಿ ಪ್ರಯತ್ನ ನಡೆಸುತ್ತಿದ್ದಾರೆ.

ಸವದತ್ತಿ ಕ್ಷೇತ್ರ
ಸವದತ್ತಿ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಕಾಂಗ್ರೆಸ್‌ನಲ್ಲಿ ಕಿತ್ತಾಟ ಜೋರಾಗಿದೆ. ಟಿಕೆಟ್ ಪಡೆಯಲು ಪಂಚನಗೌಡ್ರು ಮತ್ತು ಚೋಪ್ರಾ ಇಬ್ಬರು ಲಾಬಿ ನಡೆಸಿದ್ದು, ಸವದತ್ತಿಯ ಗುಂಪುಗಾರಿಕೆ ಕಾಂಗ್ರೆಸ್ ನಾಯಕರಿಗೆ ತಲೆ ನೋವಾಗಿದೆ. ಈ ಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರನ್ನು ಕೊನೆ ಘಳಿಗೆಯಲ್ಲಿ ಕಣಕ್ಕಿಳಿಸುವುದು ರಮೇಶ ಜಾರಕಿಹೊಳಿ ಅವರ ತಂತ್ರವಾಗಿದೆ ಅನ್ನೋ ವಿಷಯ ಗುಟ್ಟಾಗಿ ಉಳಿದಿಲ್ಲ.

ಮಿಷನ್ 12ರಲ್ಲಿ ಯಾವ ಕ್ಷೇತ್ರ
ರಮೇಶ ಜಾರಕಿಹೊಳಿ ಅವರು ಕಣ್ಣಿಟ್ಟಿರುವ ಕ್ಷೇತ್ರಗಳು : ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ,
ಚಿಕ್ಕೋಡಿ-ಸದಲಗಾ, ಬೈಲಹೊಂಗಲ, ಕಿತ್ತೂರು, ಗೋಕಾಕ್, ಕಾಗವಾಡ, ಯಮಕನಮರಡಿ,
ರಾಮದುರ್ಗ, ಖಾನಾಪುರ, ನಿಪ್ಪಾಣಿ, ಕುಡಚಿ.












Click it and Unblock the Notifications