Vande Bharat Express; ಪ್ರಾಯೋಗಿಕ ಸಂಚಾರಕ್ಕೆ 6 ತಿಂಗಳು, ಬೆಳಗಾವಿಗೆ ಬಂದಿಲ್ಲ ರೈಲು
ಬೆಳಗಾವಿ, ಮೇ 21: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಬೇಕು ಎಂಬ ಕುಂದಾ ನಗರಿ ಬೆಳಗಾವಿ ಜನರ ಬೇಡಿಕೆ ಈಡೇರಿಲ್ಲ. ರೈಲಿನ ಪ್ರಾಯೋಗಿಕ ಸಂಚಾರ ನಡೆದು ಆರು ತಿಂಗಳು ಕಳೆದಿದೆ. ಆದರೆ ರೈಲು ಸೇವೆ ಇನ್ನೂ ಆರಂಭವಾಗಿಲ್ಲ.
ಬೆಳಗಾವಿ ರೈಲು ಗಾಡಿ ಎಂಬ ಟ್ವೀಟ್ ಖಾತೆಯಲ್ಲಿ ಹಲವು ಪೋಸ್ಟ್‌ಗಳ ಮೂಲಕ ಕೇಂದ್ರ ರೈಲ್ವೆ ಇಲಾಖೆಯನ್ನು ಪ್ರಶ್ನೆ ಮಾಡಲಾಗುತ್ತಿದೆ. ವಂದೇ ಭಾರತ್ ರೈಲು ಸೇವೆ ಯಾವಾಗ ಆರಂಭವಾಗಲಿದೆ ಎಂದು ಪದೇ ಪದೇ ಕೇಳಲಾಗುತ್ತಿದೆ.

ಏಪ್ರಿಲ್ 28ರಂದು ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ್ದರು. ಮೋದಿ ಅವರನ್ನು ಆತ್ಮೀಯವಾಗಿ ಬೆಳಗಾವಿಗೆ ಸ್ವಾಗತ ಮಾಡಿ, ಅವರಿಗೆ ಸಹ ವಂದೇ ಭಾರತ್ ರೈಲು ಯಾವಾಗ? ಎಂಬ ಪ್ರಶ್ನೆ ಮುಂದಿಡಲಾಗಿತ್ತು.
ಪ್ರಾಯೋಗಿಕ ಸಂಚಾರ ಯಶಸ್ವಿ: ಮಂಗಳವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, "ನರೇಂದ್ರ ಮೋದಿ ಜೀ ಇಂದು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ನಡೆದು 6 ತಿಂಗಳು ಕಳೆಯಿತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಇನ್ನೂ ರೈಲು ಸಂಚಾರಕ್ಕೆ ಒಪ್ಪಿಗೆ ಕೊಟ್ಟಿಲ್ಲ" ಎಂದು ಟ್ವೀಟ್ ಮಾಡಿ, ಗಮನ ಸೆಳೆಯಲಾಗಿದೆ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ರೈಲು ನಂಬರ್ 20661/ 20662 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಅನುಮೋದನೆ ಸಿಕ್ಕಿದೆ.
ರೈಲು ಓಡಿಸಲು ಪೂರ್ವಭಾವಿಯಾಗಿ 2023ರ ನವೆಂಬರ್ 21ರಂದು ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿತ್ತು. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದರೂ ಸಹ ರೈಲು ಸೇವೆ ಇನ್ನೂ ಆರಂಭಗೊಂಡಿಲ್ಲ.
Respected @narendramodi @PMOIndia ji 🙏 Today 6 Month's Completed for #VandeBharat Trail Completed KSR #Bengaluru to #Belagavi
— SHRIDHAR R HULIKAVI (ಶ್ರೀಧರ ರಾ ಹುಲಿಕವಿ) (@Hulikavishri) May 21, 2024
But @AshwiniVaishnaw Holded The Extension File by the @JoshiPralhad Saying It's My Train
Sir @AmitShah @AmitShahOffice ji Why Why Silent on this Matter https://t.co/A1npvpUCoR pic.twitter.com/cax9T6qpy0
ವಂದೇ ಭಾರತ್ ರೈಲಿನ ಮೂಲಕ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ಪಯಾಣಿಕರು ಈಗ ಹುಬ್ಬಳ್ಳಿ ಅಥವ ಧಾರವಾಡದಲ್ಲಿ ರೈಲಿನಿಂದ ಇಳಿದು ಬಸ್, ಖಾಸಗಿ ವಾಹನದ ಮೂಲಕ ಬೆಳಗಾವಿಗೆ ತಲುಪಬೇಕಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಬೆಳಗಾವಿ ತನಕ ಸಂಚಾರ ನಡೆಸಿದರೆ ಗಡಿನಾಡಿಗೆ ರಾಜಧಾನಿ ಬೆಂಗಳೂರಿನಿಂದ ನೇರ ಸಂಪರ್ಕ ಸಿಗಲಿದೆ. ಆದರೆ ರೈಲು ಸಂಚಾರ ಏಕೆ ಆರಂಭಿಸುತ್ತಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ.
ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಆರ್‌ಟಿಐ ಮೂಲಕ ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಇರುವ ತಾಂತ್ರಿಕ ಸಮಸ್ಯೆಗಳು ಯಾವುವು? ಎಂದು ರೈಲ್ವೆ ಇಲಾಖೆಯನ್ನು ಕೇಳಿದ್ದರು.
ತನ್ನ ಉತ್ತರದಲ್ಲಿ ಇಲಾಖೆ ಬೆಂಗಳೂರು-ಬೆಳಗಾವಿ ನಡುವಿನ ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ನಿರ್ವಹಣೆ ಪ್ರಮುಖವಾಗಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆ ಪ್ಲಾಟ್ ಫಾರಂನಲ್ಲಿ ಲಭ್ಯವಿಲ್ಲದಿರುವುದನ್ನು ಗಮನಿಸಲಾಗಿದೆ ಎಂದು ಮಾತ್ರ ಉತ್ತರ ನೀಡಿತ್ತು. ಆದರೆ ರೈಲು ಸಂಚಾರ ಯಾವಾಗ ಪ್ರಾರಂಭ ಎಂದು 2024ರ ಜನವರಿಯಲ್ಲಿ ನೀಡಿದ ಮಾಹಿತಿಯಲ್ಲಿ ತಿಳಿಸಿರಲಿಲ್ಲ.
ಈಗ ರೈಲು ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳು ತಯಾರಾಗಿದ್ದರೂ ಸಹ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಕಾರಣಕ್ಕೆ ರೈಲು ಸಂಚಾರ ಆರಂಭಿಸುತ್ತಿಲ್ಲ ಎಂಬುದು ಜನರ ಮಾತು. ಜೂನ್ 4ರ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಗೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಈ ಬಾರಿಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ ಜಗದೀಶ್ ಶೆಟ್ಟರ್. ಧಾರವಾಡ ಮೂಲದ ಜಗದೀಶ್ ಶೆಟ್ಟರ್‌ಗೆ ಬೆಳಗಾವಿಗೆ ಬರುವಾಗ ಧಾರವಾಡದಿಂದ ವಂದೇ ಭಾರತ್ ರೈಲು ತನ್ನಿ ಎಂದು ಟ್ವೀಟ್ ಮೂಲಕ ಬೇಡಿಕೆ ಇಡಲಾಗಿತ್ತು.












Click it and Unblock the Notifications