ಯಪ್ಪಾ, ಏನ್ ಬಿಸಲೈತ್ರಿ ಬೆಳಗಾವಿ ಶಹರದಾಗ...
ಬೆಳಗಾವಿ, ನ. 25 : ಕುಂದಾನಗರಿ ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲದ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಸದನ ಕಾವೇರಲಿದೆ. ಅದಕ್ಕೆ ಸರಿಯಾಗಿ ಬೆಳಗಾವಿಯಲ್ಲಿ 31 ಡಿಗ್ರಿ ತಾಪಮಾನವಿದ್ದು, ಶಾಸಕರಿಗೆ ಸದನದ ಹೊರಗೂ ಬಿಸಿ ತಟ್ಟಲಿದೆ.
ನ.25ರ ಸೋಮವಾರದಿಂದ ಆರಂಭವಾಗುವ ಅಧಿವೇಶನ ಡಿ.6ರವರೆಗೆ ನಡೆಯಲಿದೆ. ಆರು ತಿಂಗಳ ಅಧಿಕಾರ ಪೂರ್ಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಟ್ಟು, ಸಿದ್ದರಾಮಯ್ಯ ಅಧಿವೇಶನದ ಬಿಸಿಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. (ಅಧಿವೇಶನಕ್ಕೂ ಮೊದಲು ಸಂತೋಷ್ ಲಾಡ್ ರಾಜೀನಾಮೆ)

ಸೋಮವಾರ ಬೆಳಗಾವಿಯಲ್ಲಿ ಗರಿಷ್ಟ 31 ಡಿಗ್ರಿ ತಾಪಮಾನವಿದ್ದು ಕನಿಷ್ಟ 18 ಡಿಗ್ರಿ ತಾಪಮಾನ ದಾಖಲಾಗಿದೆ. ಮಂಗಳವಾರ, ಗುರುವಾರವೂ ಬೆಳಗಾವಿಯ ಉಷ್ಣಾಂಶ 30 ಡಿಗ್ರಿ ಇರಲಿದೆ ಎಂದು ಹಮಾಮಾನ ಇಲಾಖೆಯ ವರದಿ ಹೇಳಿದೆ. ಆದ್ದರಿಂದ, ಸದನದ ಹೊರಗೂ ಶಾಸಕರಿಗೆ ಬೆಳಗಾವಿಯ ಬಿಸಿಲಿನ ದರ್ಶನವಾಗಲಿದೆ. ಆದರೆ, ಬುಧವಾರ 29 ಡಿಗ್ರಿ ಮತ್ತು ಶುಕ್ರವಾರ 25 ಡಿಗ್ರಿ ಉಷ್ಣಾಂಶವಿರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಶನಿವಾರ ಮತ್ತು ಭಾನುವಾರ ಅಧಿವೇಶನವಿರುವುದಿಲ್ಲ ಅಂದು ಸಚಿವರು ಮತ್ತು ಶಾಸಕರು ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಸ ಹೋಗಬಹುದು. ಆಗ ಅವರಿಗೆ ಬೆಳಗಾವಿಯ ಹವಾಮಾನದ ಅರಿವು ಉಂಟಾಗುತ್ತದೆ. ಶನಿವಾರ 30 ಮತ್ತು ಭಾನುವಾರ 31 ಡಿಗ್ರಿ ಉಷ್ಣಾಂಶವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. (ಬೆಳಗಾವಿ ಸುತ್ತಲಿನ ಪ್ರವಾಸಿ ತಾಣಗಳು)
ಪ್ರತಿಭಟನೆಯ ಬಿಸಿ : ಸುವರ್ಣ ವಿಧಾನಸೌಧದದ ಹೊರಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಾಹೀರಾತು ನೀತಿ ಕುರಿತು ಪ್ರತಿಭಟನೆ ನಡೆಸಲಿದೆ. ಗ್ರಾಮ ಸಹಾಯಕರ ತಮ್ಮನ್ನು ಡಿ ಗ್ರೂಪ್ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದ್ದರಿಂದ ಸಚಿವರು ಮತ್ತು ಶಾಸಕರಿಗೆ ಪ್ರತಿಭಟನೆಯ ಬಿಸಿಯೂ ತಟ್ಟಲಿದೆ.












Click it and Unblock the Notifications