ಉಪ ಚುನಾವಣೆ; ವಿಜಯನಗರಕ್ಕೆ ಸಿಎಂ ಕೊಟ್ರು ಭರ್ಜರಿ ಉಡುಗೊರೆ
Recommended Video
ಬಳ್ಳಾರಿ, ನವೆಂಬರ್ 11 : ಅನರ್ಹ ಶಾಸಕರ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರ್ಜರಿ ಉಡುಗೊರೆ ನೀಡಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಇಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರಕ್ಕೆ 243.35 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ 75 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಆನಂದ್ ಸಿಂಗ್ ಕ್ಷೇತ್ರದ ಶಾಸಕರಾಗಿದ್ದು, ಅನರ್ಹಗೊಂಡಿದ್ದಾರೆ.
ತುಂಗಭದ್ರಾ ನದಿಯಯಿಂದ ನೀರನ್ನು ಎತ್ತಿ 18 ಕೆರೆ, 4 ಚೆಕ್ ಡ್ಯಾಂ ಭರ್ತಿ ಮಾಡಿ ಕೃಷಿ, ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಅನುದಾನವನ್ನು ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದಾಗಿ ಸುಮಾರು 11 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.

ನವೆಂಬರ್ ಮೊದಲ ವಾರದಲ್ಲಿ ಗ್ರಾಮೀಣ ರಸ್ತೆ, ಕಿರು ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ 40 ಕೋಟಿ ರೂ. ಬಿಡುಗಡೆ ಮಾಡಿತ್ತು. ಈಗ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲು 243 ಕೋಟಿ ರೂ. ಅನುದಾನ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆನಂದ್ ಸಿಂಗ್ ನೀರಾವರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಈಗ ಅದಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಉಪ ಚುನಾವಣೆಯಲ್ಲಿ ಇದು ಫಲ ನೀಡಲಿದೆಯೇ ಕಾದು ನೋಡಬೇಕು.
ಡಿಸೆಂಬರ್ 5ರಂದು ವಿಜಯನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ನವೆಂಬರ್ 11ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಇದಕ್ಕೂ ಮೊದಲು ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಆನಂದ್ ಸಿಂಗ್ 2 ಬಾರಿ ಬಿಜೆಪಿಯಿಂದ, 1 ಬಾರಿ ಕಾಂಗ್ರೆಸ್‌ನಿಂದ ವಿಜಯನಗರ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈಗ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಉಪ ಚುನಾವಣೆ ಎದುರಾಗಿದೆ.
ವಿಜಯನಗರವನ್ನು ಜಿಲ್ಲೆಯಾಗಿ ಮಾಡಬೇಕು, ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಸ್ಪೀಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ಸ್ಪೀಕರ್ ಆದೇಶವನ್ನು ಆನಂದ್ ಸಿಂಗ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಬುಧವಾರ ಪ್ರಕಟವಾಗಲಿದೆ. ತೀರ್ಪು ಅನರ್ಹ ಶಾಸಕರ ಪರವಾಗಿ ಬಂದರೆ ಆನಂದ್ ಸಿಂಗ್ ಬಿಜೆಪಿಯಿಂದ ಉಪ ಚುನಾವಣಾ ಅಭ್ಯರ್ಥಿಯಾಗಲಿದ್ದಾರೆ.












Click it and Unblock the Notifications