ಪ್ರಾಣವನ್ನಾದರೂ ಬಿಡುತ್ತೇವೆ, ಆದರೆ ಮೀಸಲಾತಿ ಬಿಡುವುದಿಲ್ಲ; ಸರ್ಕಾರಕ್ಕೆ ವಚನಾನಂದ ಶ್ರೀ ಎಚ್ಚರಿಕೆ
ವಿಜಯನಗರ, ನವೆಂಬರ್, 13; ಪಂಚಮಸಾಲಿ ಸಮಾಜ ಬಾಂಧವರಿಗೆ 2ಎ ಮೀಸಲಾತಿ ಹಕ್ಕು ಪಡೆಯುವ ಈ ಬಾರಿ ಹರ ಜಾತ್ರೆಯಾಗಿ ಹೊರಹೊಮ್ಮಲಿ ಎಂದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀವಚನಾನಂದ ಮಹಾಸ್ವಾಮಿಗಳು ವಿಜಯನಗರದಲ್ಲಿ ಕರೆ ನೀಡಿದರು. ಸರ್ಕಾರ 2ಎ ಮೀಸಲಾತಿ ಕೊಡಲೇಬೇಕು. ಪ್ರಾಣವನ್ನಾದರೂ ಬಿಡುತ್ತೇವೆ, ಆದರೆ ಮೀಸಲಾತಿ ಬಿಡುವುದಿಲ್ಲ ಎಂದು ಪ್ರಮಾಣ ಮಾಡಿದರು.
ಪಂಚಮಸಾಲಿಗೆ 2 ಎ ಮೀಸಲಾತಿಗಾಗಿ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಕ್ಕೋತ್ತಾಯ ಸಮಾವೇಶ ನಡೆಯುತ್ತಿದೆ. ಹಾಗೂ ಜನಜಾಗೃತಿ ಸಮಾವೇಶವನ್ನೂ ಮಾಡುತ್ತಿದ್ದೇವೆ. ಇದರ ಭಾಗವಾಗಿ ವಿಜಯನಗರದಲ್ಲಿ ಪಂಚಮಶಾಲಿ ಸಮಾವೇಶ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು. ಎರಡು ವರ್ಷದ ಹಿಂದೆಯೇ ಕುಲಶಾಸ್ತ್ರ ಅಧ್ಯಯನ ವರದಿ ಬಂದಿರುವ ಪರಿಣಾಮ ಎಸ್‌ಸಿ, ಎಸ್‌ಟಿ ಸಮುದಾಯದಕ್ಕೆ ಮೀಸಲಾತಿ ಭಾಗ್ಯ ಸಿಕ್ಕಿದೆ.
ಇದೀಗ ವೀರಶೈವ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿಗಾಗಿ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಕುಲಶಾಸ್ತ್ರ ಅಧ್ಯಯನದ ವರದಿಯನ್ನು ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ನೀಡಬೇಕಿದೆ. ವರದಿ ಸರ್ಕಾರದ ಕೈ ಸೇರಿದ ಬಳಿಕ ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಸರ್ಕಾರದಲ್ಲಿ ನಮ್ಮವರೇ, ಸಿಎಂ, ಸಚಿವರು ಇದ್ದಾರೆ. ಅವರ ಮೇಲೆ ನಂಬಿಕೆ ಇದೆ. ಶೀಘ್ರದಲ್ಲೇ 2ಎ ಮೀಸಲಾತಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2ಎ ಮೀಸಲಾತಿ ಬಗ್ಗೆ ಸಚಿವರ ಪ್ರತಿಕ್ರಿಯೆ
ವಿಜಯದ ಸಂಕೇತವಾಗಿರುವ ವಿಜಯನಗರ ನೆಲದಿಂದ 2ಎ ಮೀಸಲಾತಿ ಕೂಗು ಎದ್ದಿದೆ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ ಎಂದು ಸಚಿವ ಆನಂದ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ. ನಗರದ ದೀಪಾಯಾನ ಶಾಲಾ ಮೈದಾನದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ 199ನೇ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು.
ಪಂಚಮಸಾಲಿ 2ಎ ಮೀಸಲಾತಿ ಜನಜಾಗೃತಿ ಬೃಹತ್ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಹಾಗೂ ಪಂಪಾ ವಿರೂಪಾಕ್ಷನ ಹೆಸರಿನಲ್ಲಿ ಜಿಲ್ಲೆ ಅಭಿವೃದ್ಧಿತ್ತ ಸಾಗುತ್ತಿದೆ. ವಿರೂಪಾಕ್ಷ, ಭುವನೇಶ್ವರಿ ದೇವಿ ಕೃಪೆಯಿಂದ 2ಎ ಮೀಸಲಾತಿ ಸಿಗುವುದು ನಿಶ್ಚಿತ. ಈ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರಲಾಗುವುದು.
ನನಗೆ ಜಾತಿ ವ್ಯವಸ್ಥೆಗಿಂತಲೂ ಮಾನವತ್ವದ ಮೇಲೆ ಹೆಚ್ಚು ನಂಬಿಕೆ ಇದೆ. ನಾನು ಎಂದಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಸಂವಿಧಾನದತ್ತವಾಗಿ ದೇಶದ ಪ್ರತಿಯೊಬ್ಬರಿಗೆ ಮೀಸಲಾತಿ ಹಕ್ಕು ಸಿಗಬೇಕಿದೆ. ಪಕ್ಷತೀತವಾಗಿ 2ಎ ಮೀಸಲಾತಿ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ನಮ್ಮ ಸಮಾಜಕ್ಕೆ ಮೀಸಲಾತಿ ಅಗತ್ಯವಿದೆ
ನಂತರ ಹೂವಿನಹಡಗಲಿ ಶಾಸಕ ಹಾಗೂ ಮಾಜಿ ಸಚಿವ ಪಿ.ಟಿ.ಪರೇಶ್ವರ ನಾಯ್ಕ ಮಾತನಾಡಿ, ಕಾಯಕಯೋಗಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲಿಸುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ, ಪಂಚಮಸಾಲಿ ಸಮಾಜ ಸಾಮಾಜಿಕವಾಗಿ ಮುಂದುವರೆದಿದ್ದರೂ ಶೈಕ್ಷಣಿಕವಾಗಿ, ಉದ್ಯೋಗ ಅವಕಾಶ ಗಿಟ್ಟಿಸಿಕೊಳ್ಳವಲ್ಲಿ ಹಿಂದಿದೆ. ಹಿಂದೆ ಮೀಸಲಾತಿ ಇಲ್ಲದ ಬದುಕಿದ ಸಮಾಜಕ್ಕೆ ಇಂದು ಮೀಸಲಾತಿ ಅಗತ್ಯವಿದೆ. 2ಎ ಮೀಸಲಾತಿಗಾಗಿ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ತೆರಳಿ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿವರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಸಮಾಜಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಇದೆ ಎಂದರು.

ನಮಗೆ ಮೀಸಲಾತಿ ಕೊಡಲು ಏನಾಗುತ್ತದೆ?
ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಮಾತನಾಡಿ, ದಲಿತ-ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಹಕ್ಕು ಸಿಗಲಿ ಎಂಬ ಉದ್ದೇಶದಿಂದ ನಾವು ಮೌನವಾಗಿದ್ದೆವು. ಈಗ ನಾವು ಸುಮ್ಮಿರಲು ಸಾಧ್ಯವಿಲ್ಲ. ಎಲ್ಲರಿಗೂ ಮೀಸಲಾತಿ ಕೊಟ್ಟಿರುವ ಸರ್ಕಾರಕ್ಕೆ ನಮಗೆ ಮೀಸಲಾತಿ ಕೊಡಲು ಏನು ಆಗುತ್ತದೆ. ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ಪಂಚಾಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಯಾರದ್ದೋ ಒತ್ತಡಕ್ಕೆ ಮಣಿದು ಮೀಸಲಾತಿ ನೀಡಲು ಮೀನಾಮೇಷ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತೇವೆ
ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ನನಗೆ ಆಶಿರ್ವಾದ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ಅವರ ಋಣ ತೀರಿಸಲು 2 ಮೀಸಲಾತಿ ಕೊಡಿಸಲು ಸರ್ಕಾರದ ಗಮನ ಸೆಳೆಯುವೆ ಎಂದರು. ನಂತರ ಶಾಸಕ ಭೀಮನಾಯ್ಕ ಮಾತನಾಡಿ, ಎಲ್ಲ ಸಮಾಜದ ಆರ್ಶಿವಾದದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆ ಆಗಿರುವ ನನಗೆ ವಿಶೇಷವಾಗಿ ಪಂಚಮಸಾಲಿ ಸಮಾಜದ ಆರ್ಶಿವಾದ ಇದೆ ಎಂದರು. ವೈ ದೇವೆಂದ್ರಪ್ಪ ಮಾತನಾಡಿ, 2ಎ ಮೀಸಲಾತಿ ಕೊಡಿಸಲು ಸಂಸದ ಕರಡಿ ಸಂಗಣ್ಣ ಮತ್ತು ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಬಾವಿಬೆಟ್ಟಪ್ಪ, ಬಿ.ಸಿ ಉಮಾಪತಿ, ಬಸವರಾಜ ದಿಂಡೂರು, ಬಿ.ನಾಗನಗೌಡ, ಸೋಮನಗೌಡ ಪಾಟೀಲ್, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ್, ಬಸಾಪುರ ಬಸವರಾಜ, ಸುಮಂಗಳ ಬಸವರಾಜ, ಮಂಜುನಾಥ ನವಲಗುಂದ, ಮಂಗಳ ಬಸವರಾಜ, ಅಶ್ವಿನ್, ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ಸಂಘದ ಯುವಘಟಕದ ಪ್ರಧಾನ ಕಾರ್ಯದರ್ಶಿ ಕಿಚಡಿ ಕೊಟ್ರೇಶ್ ಇದ್ದರು.












Click it and Unblock the Notifications