ಹಂಪಿ ಕಂಬಗಳನ್ನು ಧ್ವಂಸಗೊಳಿಸಿದ ಆರೋಪಿಗಳ ಹೆಸರು ಬಹಿರಂಗವಾಗಿಲ್ಲ ಏಕೆ?
ಬಳ್ಳಾರಿ, ಫೆಬ್ರವರಿ 07: ಕಳೆದ ವಾರ ಹಂಪಿ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯದ ಮಂಟಪದ ಕಲ್ಲುಗಂಬಗಳನ್ನು ನಾಲ್ವರು ಯುವಕರು ಬೀಳಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆ ಕೈಗೊಂಡು, ಆ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಇದೀಗ ವಿಚಾರಣೆ ವೇಳೆ ಆರೋಪಿಗಳು ತಾವೇ ಈ ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುವಕರ ಹೇಳಿಕೆಗೂ ಘಟನೆಗೂ ತಾಳೆಯಾಗುತ್ತಿರುವುದರಿಂದ ಆ ಯುವಕರೇ ಆರೋಪಿಗಳು ಎನ್ನುವುದು ಬಹುತೇಕ ಖಚಿತವಾಗಿದೆ.
ಆದರೆ ಎಲ್ಲೋ ಒಂದು ಕಡೆ ಈ ತನಿಖೆ ಹಾದಿ ತಪ್ಪುವ ಮುನ್ಸೂಚನೆ ಕಾಣುತ್ತಿದೆ. ಯಾಕೆಂದರೆ ಆ ನಾಲ್ವರು ಯುವಕರು ಆರೋಪಿಗಳೆಂದು ಗೊತ್ತಿದ್ದರೂ ಹೆಸರು ಬಹಿರಂಗಪಡಿಸದಂತೆ ಮೇಲ್ಮಟ್ಟದಲ್ಲಿ ರಾಜಕೀಯ ಒತ್ತಡ ಹೇರಲಾಗಿದೆ.

ಆರೋಪಿಗಳು ಮೂಲತಃ ಎಲ್ಲಿಯವರು?ಯಾರೆಂಬುದನ್ನು ಹೇಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅವರೆಲ್ಲಾ ಮಧ್ಯಪ್ರದೇಶದವರು ಎಂಬುದು ತಿಳಿದು ಬಂದಿದೆ. ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಆರೋಪಿಗಳ ಹೆಸರು ಹೇಳಲು ಹಿಂದೇಟು ಹಾಕುತ್ತಿರುವುದು ಅನುಮಾನ ಸೃಷ್ಟಿಸಿದೆ.

ಸರ್ಕಾರ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಚುರುಕುಗೊಳಿಸಿತ್ತು. ಬೆಂಗಳೂರು ಮತ್ತು ಮುಂಬಯಿಗೂ ತೆರಳಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು.

ಈ ಘಟನೆಯ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಪುರಾತತ್ವಸರ್ವೇಕ್ಷಣಾ ಇಲಾಖೆ, ಹಂಪಿ ವಿಶ್ವಪರಂಪರೆ ನಿರ್ವಹಣಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗಳು ಹಂಪಿಯ ಸ್ಮಾರಕಗಳ ಕಾವಲಿಗೆ ಹೆಚ್ಚಿನ ಭಧ್ರತೆ ನಿಯೋಜನೆಗೆ ಆಯೋಜಿಸಿವೆ.












Click it and Unblock the Notifications