ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ರದ್ದು!
ಬಳ್ಳಾರಿ, ಜನವರಿ 29: ದಿಢೀರ್ ಬೆಳವಣಿಗೆಯೊಂದರಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡ)ಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಆದೇಶ ರದ್ದುಗೊಳಿಸಲಾಗಿದೆ. ಬುಧವಾರ ಕೆ. ಎ. ರಾಮಲಿಂಗಪ್ಪ ಅವರನ್ನು ನೂತನ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ. ಎಸ್. ಶಿವಕುಮಾರಸ್ವಾಮಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ದಿನಾಂಕ 27/1/2020ರಂದು ಕೆ. ಎ. ರಾಮಲಿಂಗಪ್ಪ ಅವರನ್ನು ನೇಮಕ ಮಾಡಿದ್ದ ಆದೇಶ ರದ್ದಾಗಿದೆ.
ಕಳೆದ 8 ತಿಂಗಳಿನಿಂದ ಅಧ್ಯಕ್ಷರಾಗಿದ್ದ ದಮ್ಮೂರ್ ಶೇಖರ್ ಅವರನ್ನು ದಿಢೀರ್ ಬದಲಾವಣೆ ಮಾಡಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸಚಿವ ಕೆ. ಎಸ್. ಈಶ್ವರಪ್ಪ ಸಂಬಂಧಿಯಾದ ಬಿಜೆಪಿ ಮುಖಂಡ ರಾಮಲಿಂಗಪ್ಪ ಅವರನ್ನು ನೂತನ ಅಧ್ಯಕ್ಷರಾಗಿ ನೇಮಿಸಲಾಗಿತ್ತು.

ಶುಕ್ರವಾರ ಬುಡ ನೂತನ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಹಿಂದೆ ಅಧ್ಯಕ್ಷರಾಗಿದ್ದ ದಮ್ಮೂರ್ ಶೇಖರ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3(3) (ಎ) ರ ಅನ್ವಯ ಮತ್ತು 3 (4)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ವರೆಗೆ ಅಥವ ಮುಂದಿನ ಆದೇಶದ ವರೆಗೆ ಯಾವುದು ಮೊದಲೊ ಅಲ್ಲಿಯ ತನಕ ದಮ್ಮೂರ್ ಶೇಖರ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.













Click it and Unblock the Notifications