ಯುಗಾದಿ ಹಬ್ಬ; ಪ್ರಯಾಣಿಕರಿಗಾಗಿ ವಿಶೇಷ ಬಸ್ ವ್ಯವಸ್ಥೆ
ಬಳ್ಳಾರಿ, ಮಾರ್ಚ್ 24; ಯುಗಾದಿ ಹಬ್ಬದ ಅಂಗವಾಗಿ ಹಲವಾರು ಜನರು ವಿವಿಧ ಜಿಲ್ಲೆಗಳಿಗೆ, ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನಲೆಯಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದಿಂದ ಯುಗಾದಿ ಹಬ್ಬದ ಪ್ರಯುಕ್ತ ಹೊಸಪೇಟೆಯಿಂದ ಶ್ರೀಶೈಲಕ್ಕೆ ಮಾರ್ಚ್ 21ರಿಂದಲೇ ವಿಶೇಷ ಬಸ್ ಸೌಲಭ್ಯವನ್ನು ಆರಂಭಿಸಿದೆ.
ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಬಸ್ ನಿಲ್ದಾಣಗಳಿಂದಲೂ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಹೊಸಪೇಟೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿಯಿಂದ ಶ್ರೀಶೈಲಕ್ಕೆ ಬಸ್‌ಗಳು ವಯಾ ಹೊಸಪೇಟೆ, ಬಳ್ಳಾರಿ, ಗುಂತಕಲ್, ಗುತ್ತಿ, ಕರ್ನೂಲ್ ಮಾರ್ಗವಾಗಿ ಚಲಿಸಲಿವೆ. ಈ ಬಸ್‌ಗಳು ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಿಂದ ಮಾರ್ಚ್ 21ರಿಂದ ಏಪ್ರಿಲ್ 20ರವರೆಗೆ ಬೆಳಗ್ಗೆ 7.30 ಹಾಗೂ ಸಂಜೆ 6.30ಕ್ಕೆ ಹೊರಡಲಿವೆ.
ಮಾರ್ಚ್ 21ರಿಂದ ಹೊಸಪೇಟೆ-ಶಿರಡಿ ರಾಜಹಂಸ ಬಸ್ ವ್ಯವಸ್ಥೆಯನ್ನು ಪುನರ್ ಪ್ರಾರಂಭಿಸಲಾಗಿದ್ದು, ಮೊದಲಿನ ವೇಳಾಪಟ್ಟಿಯಂತೆ ಸಂಜೆ 5ಕ್ಕೆ ಹೊಸಪೇಟೆ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಲಿದೆ.
ಕಲಬುರಗಿಯಿಂದಲೂ ವಿಶೇಷ ಬಸ್; ಶ್ರೀಶೈಲಂನಲ್ಲಿ ನಡೆಯುವ ರಥೋತ್ಸವಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಕಲಬುರಗಿ ಘಟಕ-1 ಮತ್ತು 4, ಚಿಂಚೋಳಿ, ಚಿತ್ತಾಪೂರ, ಕಾಳಗಿ ಹಾಗೂ ಸೇಡಂ ಘಟಕಗಳಿಂದ ಶ್ರೀಶೈಲಂಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸುನೀಲಕುಮಾರ್ ಚಂದರಗಿ ಈ ಕುರಿತು ಮಾಹಿತಿ ನೀಡಿದ್ದಾರೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಘಟಕಗಳ ವ್ಯಾಪ್ತಿಗೆ ಬರುವ ಕಲಬುರಗಿ, ಚಿಂಚೋಳಿ, ಚಿತ್ತಾಪೂರ, ಕಾಳಗಿ, ಕಮಲಾಪೂರ, ಶಹಾಬಾದ ಹಾಗೂ ಸೇಡಂ ತಾಲೂಕು ಪ್ರದೇಶಗಳಿಂದ ಹಾಗೂ ಇತರೆ ಗ್ರಾಮಗಳಿಂದ ನೇರವಾಗಿ 45 ರಿಂದ 50 ಜನರು ಒಟ್ಟಿಗೆ ಸೇರಿ ಶ್ರೀಶೈಲಂಗೆ ಪ್ರಯಾಣಿಸಲು ಇಚ್ಛಿಸಿದ್ದಲ್ಲಿ ಪ್ರಯಾಣಿಕರು ಪ್ರಯಾಣಿಸುವ ಗ್ರಾಮ/ ಸ್ಥಳದಿಂದಲೇ ನೇರವಾಗಿ ಶ್ರೀಶೈಲಂಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ 7760992102, 7760992101, ಕಲಬುರಗಿ ಘಟಕ-1ರ ಘಟಕ ವ್ಯವಸ್ಥಾಪಕ 7760992113, ಕಲಬುರಗಿ ಘಟಕ-4ರ ಘಟಕ ವ್ಯವಸ್ಥಾಪಕ 7022012103, ಚಿಂಚೋಳಿ ಘಟಕದ ವ್ಯವಸ್ಥಾಪಕ 7760992117 ಕರೆ ಮಾಡಬಹುದು.
ಇನ್ನು ಚಿತ್ತಾಪೂರ ಘಟಕದ ಘಟಕ ವ್ಯವಸ್ಥಾಪಕರನ್ನು 7760992119, ಕಾಳಗಿ ಘಟಕದ ಘಟಕ ವ್ಯವಸ್ಥಾಪಕರನ್ನು 7760992120 ಹಾಗೂ ಸೇಡಂ ಘಟಕದ ಘಟಕ ವ್ಯವಸ್ಥಾಪಕರನ್ನು 7760992466 ಸಂಖ್ಯೆಗಳಿಂದ ಸಂಪರ್ಕಿಸಬಹುದು.
ಅಪಾರ ಭಕ್ತರು ತೆರಳುತ್ತಾರೆ; ಯುಗಾದಿ ಹಬ್ಬದಂದು ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಜಾತ್ರೆ ನಡೆಯುತ್ತದೆ. ಕರ್ನಾಟಕದಿಂದ ಅಪಾರ ಭಕ್ತರು ಈ ಜಾತ್ರೆಗೆ ತೆರಳುತ್ತಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಜಾತ್ರೆಗೆ ಭಕ್ತರು ತೆರಳಿರಲಿಲ್ಲ.
ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಯುಗಾದಿ ರಥೋತ್ಸವಕ್ಕೆ ಪಾದಯಾತ್ರೆ ಹಾಗೂ ಬಸ್ ಮೂಲಕ ತೆರಳುತ್ತಾರೆ. ಈ ಭಕ್ತರಿಗೆ ಅನುಕೂಲವಾಗಲಿ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಶೇಷ ಬಸ್ ಓಡಿಸುತ್ತಿದೆ.
ಈ ಬಾರಿ ಜಾತ್ರೆಗೆ ಯಾವುದೇ ಕೋವಿಡ್ ನಿರ್ಬಂಧಗಳಿಲ್ಲ. ಆದ್ದರಿಂದ ಸಾವಿರಾರು ಭಕ್ತರು ಕರ್ನಾಟಕದಿಂದ ಸಾಗುವ ನಿರೀಕ್ಷೆ ಇದೆ. ಹೋಳಿ ಹಬ್ಬದ ಬಳಿಕ ಕಲಬುರಗಿ, ಬೆಳಗಾವಿ ಭಾಗದ ಜನರು ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕಾಗಿ ಪಾದಯಾತ್ರೆ ಹೊರಡುತ್ತಾರೆ. ಕೆಲವರು ಬಸ್ ಮೂಲಕ ಸಂಚಾರ ನಡೆಸುತ್ತಾರೆ.












Click it and Unblock the Notifications