ತುಂಗಭದ್ರಾಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ: ಅಪ್‌ಡೇಟ್
ಬಳ್ಳಾರಿ, ಮಾರ್ಚ್ 13: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಚರ್ಚೆಗಳು ಆರಂಭವಾಗಿ ದಶಕಗಳು ಉರುಳಿವೆ. ಆದರೆ ಇನ್ನೂ ಸಹ ಈ ಬೇಡಿಕೆ ಈಡೇರಿಲ್ಲ. ತುಂಗಭದ್ರಾ ಡ್ಯಾಂ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ಈ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಈ ಕುರಿತು ಈಗ ಅಪ್‌ಡೇಟ್ ಸಿಕ್ಕಿದೆ.
ಗುರುವಾರ ವಿಧಾನ ಪರಿಷತ್‌ನಲ್ಲಿ ಬಸನಗೌಡ ಬಾದರ್ಲಿ ಕೇಳಿದ್ದ ಪ್ರಶ್ನೆಗೆ ಉಪ ಮುಖ್ಯಮಂತ್ರಿಯೂ ಆಗಿರುವ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಉತ್ತರ ನೀಡಿದ್ದಾರೆ. ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮಗಳು ಏನು? ಎಂದು ಪರಿಷತ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.

ಈ ಪ್ರಶ್ನೆಗೆ ಉತ್ತರ ನೀಡಿದ ಡಿ. ಕೆ. ಶಿವಕುಮಾರ್, "ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಮಾರ್ಚ್ 18ರಂದು ಕರೆದಿದ್ದಾರೆ. ಅಂದು ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಲಾಗುತ್ತದೆ" ಎಂದು ಹೇಳಿದರು.
"ಈ ವಿಚಾರವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಪತ್ರವನ್ನು ಸಹ ಬರೆದಿದ್ದೇನೆ. ರಾಜಸ್ಥಾನದ ಉದಯಪುರದಲ್ಲಿ ನಡೆದ ಸಮಾವೇಶದಲ್ಲಿ ಎರಡೂ ರಾಜ್ಯಗಳ ಸಚಿವರ ಜೊತೆ ಚರ್ಚಿಸಿದ್ದೇನೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಚರ್ಚೆ ಮಾಡಲು ಸಮಯ ಕೇಳಿದ್ದೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ಡಿ. ಕೆ. ಶಿವಕುಮಾರ್ ತಮ್ಮ ಉತ್ತರದಲ್ಲಿ, "ಎರಡು ರಾಜ್ಯಗಳ ಜೊತೆ ಚರ್ಚೆ ಮಾಡಿದ ನಂತರ ತುಂಗಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುತ್ತದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಈ ವಿಚಾರದ ಕುರಿತು ಚರ್ಚೆ ಮಾಡಲಾಗುತ್ತದೆ" ಎಂದು ಭರವಸೆ ನೀಡಿದ್ದಾರೆ" ಎಂದರು.
ನೀರು ವ್ಯರ್ಥವಾಗುತ್ತಿದೆ: ಸಚಿವ ಡಿ. ಕೆ. ಶಿವಕುಮಾರ್, "ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿರುವ ಕಾರಣಕ್ಕೆ ಸುಮಾರು 25 ರಿಂದ 30 ಟಿಎಂಸಿ ಅಡಿ ನೀರು ನಮಗೆ ಸಿಗದೆ ವ್ಯರ್ಥವಾಗುತ್ತಿದೆ. ಸೋಮತೋಲಿತ ಡ್ಯಾಂ ನಿರ್ಮಾಣಕ್ಕೆ ಸುಮಾರು 15 ಸಾವಿರ ಎಕರೆ ಭೂಮಿ ಬೇಕು ಅಂದಾಜಿಸಲಾಗಿದೆ. ಡಿಪಿಆರ್ ಕೂಡಾ ತಯಾರು ಮಾಡಲಾಗಿದೆ" ಎಂದು ವಿವರಣೆ ನೀಡಿದರು.
"ಸಚಿವರಾದ ಬೋಸರಾಜು, ಈ ಭಾಗದ ಇತರ ಶಾಸಕರು ತುಂಗಭದ್ರಾ ಸಮಾನಾಂತರ ಡ್ಯಾಂ ಆಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಈ ಕುರಿತು ಸಚಿವರಾದ ವಿ. ಸೋಮಣ್ಣ, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುತ್ತೇವೆ ಎಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಹೇಳಿತ್ತು, ಅನುದಾನ ನೀಡುವುದಾಗಿಯೂ ಭರವಸೆ ನೀಡಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಮತ್ತೆ ಸಮಾನಾಂತರ ಜಲಾಶಯದ ಕುರಿತು ಚರ್ಚೆಗಳು ಆರಂಭವಾಗಿವೆ.
2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದಾಗ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ತಯಾರು ಮಾಡಲಾಗಿತ್ತು. ಯೋಜನಾ ವೆಚ್ಚ ಸುಮಾರು 13,040 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ತುಂಗಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಕೈಗೊಳ್ಳುವ ಮೊದಲು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಒಪ್ಪಿಗೆ ಪಡೆಯಬೇಕು. ನವಲಿ ಗ್ರಾಮ ಕೊಪ್ಪಳ ಜಿಲ್ಲೆಯಲ್ಲಿ ಬರುತ್ತದೆ. ಈ ಜಲಾಶಯ ನಿರ್ಮಾಣದ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.












Click it and Unblock the Notifications