ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡೋಜ ದರೋಜಿ ಈರಮ್ಮ ಅಸ್ತಂಗತ

By ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಆ. 12 : ಜಾನಪದ ಕ್ಷೇತ್ರದ ಅದ್ಭುತ ಪ್ರತಿಭೆ, 'ನಾಡೋಜ' ಗೌರವ ಪದವಿ ಪುರಸ್ಕೃತೆ, ಜನಪದಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬುರ್ರಕಥಾ ದರೋಜಿ ಈರಮ್ಮ (82) ಮಂಗಳವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಮಗಳು, ಅಳಿಯ, ಮೊಮ್ಮಗ ಮತ್ತು ಅಪಾರ ಸಂಖ್ಯೆಯ ಆಪ್ತರು, ಬೆಂಬಲಿಗರು ಹಾಗು ಕಲಾಭಿಮಾನಿಗಳನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿಕೋರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯಕ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗು ಅಧಿಕಾರಿಗಳು, ಕಲಾಸಕ್ತರು, ಕಲಾಭಿಮಾನಿಗಳು, ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು - ಸದಸ್ಯರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ವೈದ್ಯಕೀಯ ವೆಚ್ಚ ಭರಿಸಿದ ಇಲಾಖೆ: ಬುರ್ರಕಥಾ ಈರಮ್ಮ ಅವರು ಅನಾರೋಗ್ಯದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭರಿಸಿದೆ.

ಅಂತ್ಯ ಸಂಸ್ಕಾರ : ಈರಮ್ಮ ಅವರ ಸ್ವಗ್ರಾಮವಾದ ಹಳೆದರೋಜಿಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಕುಟುಂಬದ ವಿಧಿ ಸಂಪ್ರದಾಯಗಳ ಪ್ರಕಾರ ಸಕಲ ಗೌರವಗಳಿಂದ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುರ್ರಕಥಾ ಪ್ರಾಕಾರದ ಮೂಲಕ ಜನಪದ ಪ್ರತಿಭೆ

ಬುರ್ರಕಥಾ ಪ್ರಾಕಾರದ ಮೂಲಕ ಜನಪದ ಪ್ರತಿಭೆ

ಬುರ್ರಕಥಾ ಪ್ರಾಕಾರದ ಮೂಲಕ ಜನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದ ಬುರ್ರಕಥಾ ದರೋಜಿ ಈರಮ್ಮ ಕನ್ನಡ ನಾಡಿನ ಹೆಮ್ಮೆ. ನಿರಕ್ಷರಿ ಅಲೆಮಾರಿ ಸಮುದಾಯದ ಬುರ್ರಕಥಾ ಈರಮ್ಮ ಎಂದೇ ಚಿರಪರಿಚಿತ. ನಾಡಿನ ಅಪರೂಪದ ಪ್ರತಿಭೆ. ಜನಪದ ಕಥನಕಾವ್ಯಗಳ ಗಾಯನಕ್ಕೆ ಬದುಕನ್ನೇ ಮುಡುಪಾಗಿಟ್ಟ ಸಾಧಕಿ.

ಬಾಲ ನಾಗಮ್ಮ, ಸ್ಯಾಸಿ ಚಿನ್ನಮ್ಮ, ಎಲ್ಲಮ್ಮ, ಗಂಗಿ ಗೌರಿ, ಕುಮಾರ ರಾಮ, ಕೃಷ್ಣ ಗೊಲ್ಲ, ಬಬ್ಬುಲಿ ನಾಗರೆಡ್ಡಿ, ಆದೋನಿ ಲಕ್ಷ್ಮಮ್ಮ, ಬಲಿ ಚಕ್ರವರ್ತಿ, ಮಾರವಾಡಿ ಸೇಠಿ, ಜೈಸಿಂಗ್ ರಾಜ ಮತ್ತು ಮಹಮದ್ ಖಾನರ ಜನಪದ ಕಥನ ಕಾವ್ಯಗಳನ್ನು ನಿರರ್ಗಳವಾಗಿ ಸದಾಕಾಲ ಹಾಡುವಷ್ಟು ಚೈತನ್ಯ ಶೀಲರಾಗಿದ್ದರು.

ಬುಡಕಟ್ಟು ಮಹಾಕಾವ್ಯಗಳ ಭಂಡಾರ

ಬುಡಕಟ್ಟು ಮಹಾಕಾವ್ಯಗಳ ಭಂಡಾರ

ಇವರ ತುದಿ ನಾಲಗೆ ಮೇಲೆ ಎರಡು ಲಕ್ಷ ಸಾಲುಗಳಷ್ಟು ಅಂದರೆ ಏಳು ಸಾವಿರ ಪುಟಗಳ ಬುರ್ರಕಥಾ ಸಾಹಿತ್ಯ ಪೂರ್ವಜರ ಕೊಡುಗೆಯಾಗಿ ಒಲಿದಿತ್ತು. ಈ ಸಾಹಿತ್ಯವನ್ನು ತೆಲುಗು ಭಾಷೆಯಿಂದ ಕನ್ನಡಕ್ಕೆ ತಂದ ಕೀರ್ತಿ, ಗೌರವ ಇವರಿಗೆ ಸಲ್ಲುತ್ತದೆ. ಹೆತ್ತವರಿಂದ ಬುರ್ರವಾದ್ಯ (­ಡಿಮ್ಮಿ, ಗಗ್ಗರಿ, ತಂಬೂರಿ) ನುಡಿಸುವುದು ಮತ್ತು ಬುರ್ರಕಥೆಗಳನ್ನ ಹಾಡುವುದು ಕಲಿತಿದ್ದ ಇವರು 11 ಜನಪದ ಹಾಗು ಬುಡಕಟ್ಟು ಮಹಾಕಾವ್ಯಗಳನ್ನು ಪ್ರಸ್ತುತ ಪಡಿಸಬಲ್ಲವರಾಗಿದ್ದರು.

ಈರಮ್ಮ ಅವರ ಪ್ರಕಟಿತ ಕಾವ್ಯಗಳು

ಈರಮ್ಮ ಅವರ ಪ್ರಕಟಿತ ಕಾವ್ಯಗಳು

ಹಂಪಿ ಕನ್ನಡ ವಿವಿಯ ಪ್ರಾಧ್ಯಪಕ ಡಾ. ಕೆ. ಎಂ. ಮೈತ್ರಿ ಅವರು ಕುಮಾರ ರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಮತ್ತು ಎಲ್ಲಮ್ಮನ ಕಥನ ಕಾವ್ಯಗಳನ್ನು ಸಂಪಾದಿಸಿದ್ದಾರೆ. ಹಾವೇರಿ ಜಾನಪದ ವಿವಿಯ ಕುಲ ಸಚಿವ ಡಾ. ಸಾಚಿ. ರಮೇಶ್ ಅವರು ಸ್ಯಾಸಿ ಚಿನ್ನಮ್ಮನ ಕಾವ್ಯವನ್ನು ಸಂಪಾದಿಸಿದ್ದಾರೆ.

ನಿರಕ್ಷರಿಯಾದರೂ, ಅದ್ಭುತ ಪ್ರತಿಭೆಯಿಂದಾಗಿ ಸಂಶೋಧಕರಿಗೆ ಅಧ್ಯಯನ ವಸ್ತುವಾಗಿದ್ದರು. 60 ವರ್ಷಗಳ ಕಾಲ ಸಾವಿರಾರು ಗ್ರಾಮ, ಕುಗ್ರಾಮಗಳನ್ನು ಸುತ್ತಿ ಬುರ್ರಕಥಾ ಕಥನ ಕಾವ್ಯಗಳ ಗಾಯನದ ಸುಧೆ ಹರಿಸಿದ್ದರು.

 ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು

ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು

ಹತ್ತಾರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ದರೋಜಿ ಈರಮ್ಮ ಅವರನ್ನು ಹುಡುಕಿಕೊಂಡು ಬಂದಿವೆ. ಹಂಪಿ ಕನ್ನಡ ವಿವಿ ತನ್ನ 15 ಘಟಿಕೋತ್ಸವದಲ್ಲಿ ಪ್ರತಿಷ್ಠಿತ ನಾಡೋಜ ಪದವಿ ನೀಡಿ ಗೌರವಿಸಿದೆ.

1999 ರಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2003 ರಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಸತ್ಕರಿಸಿದೆ. ಬಳ್ಳಾರಿ ವಿಜಯ ವಿಠಲ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ, ಡಾ. ರಾಜಕುಮಾರ್ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಬುರ್ರಕಥಾ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರ ಗಳಿಗೆ ಪಾತ್ರರಾಗಿದ್ದಾರೆ. ಬುರ್ರಕಥಾ ಈರಮ್ಮ ಅವರ ಆತ್ಮಕಥೆಯೂ ಪ್ರಕಟವಾಗಿದೆ.

English summary
The folk pride of Kannada Region Nadoja Daroji Eeramma passed away today in Bellary. She was 82. Being an illiterate, nomadic Budga Jangama woman, Burrakatha Eeramma is a rare kind of uneven talent of Bellary. She is one among the great, unique achiever who dedicated her entire life for Folk Ballad, an eye catching performing art namely Burrakatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X