ಬಳ್ಳಾರಿ; ಕಲ್ಯಾಣ ರಾಜ್ಯದ ಗಡಿ ನುಂಗಿದವರು ಜನರ ಬಳಿ ಹೇಗೆ ಮತ ಕೇಳುತ್ತಾರೆ?: ಜನಾರ್ದನ್ ರೆಡ್ಡಿಗೆ ಗಣಿ ಉದ್ಯಮಿ ಪ್ರಶ್ನೆ
ಬಳ್ಳಾರಿ, ಡಿಸೆಂಬರ್, 28: ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಕಲ್ಯಾಣ ರಾಜ್ಯದ ಹೆಸರಿನಲ್ಲಿ ಇತ್ತೀಚೆಗಷ್ಟೇ ನೂತನ ಪಕ್ಷವನ್ನು ಘೋಷಣೆ ಮಾಡಿದ್ದರು. ಆದರೆ ಜನಾರ್ದನ್ ರೆಡ್ಡಿಯವರು ಕಲ್ಯಾಣ ರಾಜ್ಯದ ಗಡಿ ಧ್ವಂಸ ಮಾಡಿದವರು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಬಳ್ಳಾರಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಗಡಿ ನುಂಗಿದ ವಂಚನೆ ಪ್ರಕರಣದಿಂದ ಅವರು ಮೊದಲು ಮುಕ್ತರಾಗಿ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ (ಡಿಸೆಂಬರ್ 27) ವಿಡಿಯೋ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಜನಾರ್ದನ್ ರೆಡ್ಡಿ ಅವರು ತಮ್ಮ ಪಕ್ಷಕ್ಕೆ ಕಲ್ಯಾಣ ರಾಜ್ಯ ಎಂದು ಹೆಸರಿಟ್ಟಿರುವುದೇ ಹಾಸ್ಯಾಸ್ಪದವಾಗಿದೆ. ಅವರು ಕಲ್ಯಾಣ ರಾಜ್ಯವನ್ನು ನುಂಗಿದವರಾಗಿದ್ದಾರೆ. ಅವರ ಮಾಲೀಕತ್ವದ 4 ಗಣಿ ಗುತ್ತಿಗೆಗಳ ರದ್ಧತಿಗೆ ಶಿಫಾರಸ್ಸಾಗಿದೆ, ಸುಪ್ರೀಂಕೋರ್ಟ್ ರೂಪಿಸಿದ ಸಿಇಸಿ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಸಿಇಸಿ ವರದಿಗಳು ಸುಪ್ರೀಂಕೋರ್ಟ್‌ನ ಮುಂದಿವೆ. ಅಕ್ರಮ ಗಣಿಗಾರಿಕೆಯಲ್ಲಿ ಜನಾರ್ದನ್ ರೆಡ್ಡಿ ಪ್ರಮುಖ ಆರೋಪಿ ಆಗಿದ್ದಾರೆ. ಆಲಿಖಾನ್ 4, 5ನೇ ಆರೋಪಿ, ಇಂತಹವರು ಕಲ್ಯಾಣ ರಾಜ್ಯದ ಹೆಸರಿನಲ್ಲಿ ರಾಜಕೀಯ ಪಕ್ಷ ಕಟ್ಟಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಮೊದಲು ಕಳಂಕ ಮುಕ್ತರಾಗಿ ಬರಲಿ
ಜನಾರ್ದನ್ ರೆಡ್ಡಿ ಅವರು ತಮ್ಮಷ್ಟಕ್ಕೆ ತಾವೇ ಅಪ್ಪಟ ಚಿನ್ನ ಎಂದು ಪ್ರಮಾಣ ಪತ್ರ ಕೊಟ್ಟುಕೊಳ್ಳುತ್ತಾರೆ. ಆದರೆ ನಾವು ಅಪ್ಪಟ ಚಿನ್ನ, ಏಕೆಂದರೆ ನಿಮ್ಮ ವಿರುದ್ಧ ಹೋರಾಟ ಮಾಡಿ ಇನ್ನೂ ಜೀವಂತವಾಗಿ ಇದ್ದೇವೆ. ರೆಡ್ಡಿ ಅವರ ಪಕ್ಷವನ್ನು ಗಂಗಾವತಿ, ರಾಜ್ಯದ ಜನರು ತಿರಸ್ಕರಿಸಬೇಕು. ಏಕೆಂದರೆ ಕಲ್ಯಾಣ ರಾಜ್ಯದ ಗಡಿ ನುಂಗಿದವರು ಜನರ ಮತ ಹೇಗೆ ಕೇಳುತ್ತಾರೆ? ಎಂದು ಪ್ರಶ್ನಿಸಿರುವ ಅವರು, ರೆಡ್ಡಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮೊದಲು ಕಳಂಕ ಮುಕ್ತರಾಗಿ ಬರಲಿ, ಆಮೇಲೆ ಜನರ ಮುಂದೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವುದಿಲ್ಲ
ಇನ್ನು ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಪಕ್ಷಕ್ಕೆ ಹಿನ್ನೆಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ಆದರೆ, ಜನಾರ್ಧನ್ ರೆಡ್ಡಿ ಹೊಸ ಪಕ್ಷ ಕಟ್ಟಿದ್ದಾರೆ. ಅವರ ಹಾದಿ ಅವರಿಗೆ, ನಮ್ಮ ಹಾದಿ ನಮಗೆ. ಆದರೆ ಅವರ ನಮ್ಮ ಸ್ನೇಹಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಇತ್ತೀಚೆಗಷ್ಟೇ ಸಚಿವ ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದರು.

ಮಾಜಿ ಸಚಿವ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಎನ್ನುವ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದರು. ಈ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ರೆಡ್ಡಿ ಬುದ್ಧಿವಂತರು, ತಿಳಿದವರು, ಅನುಭವ ಇದ್ದ ವ್ಯಕ್ತಿ ಇದ್ದಾರೆ. ರೆಡ್ಡಿ ಬಿಜೆಪಿ ಶಕ್ತಿಯಾಗಿದ್ದರು, ಪಕ್ಷವು ಅವರಿಗೆ ಶಕ್ತಿಯಾಗಿ ನಿಂತಿತ್ತು ಎಂದು ಅವರ ಪ್ರಾಣ ಸ್ನೇಹಿತನಾಗಿ ಹೇಳುತ್ತಿದ್ದೇನೆ ಎಂದರು. ನನ್ನ ಬೆಳವಣಿಗೆಗೆ ಜನಾರ್ಧನ್ ರೆಡ್ಡಿ ಅವರು ತುಂಬಾ ಸಹಕಾರಿ ಆಗಿದ್ದಾರೆ ಎಂದಿದ್ದರು. ಹಾಗೆಯೇ ನಾನು ಅವರಿಗೆ ಬಂಡೆಯಾಗಿ ನಿಂತಿದ್ದೇನೆ. ನಾನುಂತೂ ಬಿಜೆಪಿಯಲ್ಲಿರುವ ಸಿಎಂ ಬಸವರಾಜ ಬೊಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವೆ ಎಂದರು. ರೆಡ್ಡಿ ಅವರು ವೈಯಕ್ತಿಕವಾಗಿ ಪಕ್ಷವನ್ನು ಮಾಡಿದ್ದಾರೆ. ಬಿಜೆಪಿ ಅವರನ್ನು ಯಾವತ್ತು ಬಿಟ್ಟುಕೊಟ್ಟಿಲ್ಲ. ಅವರು ಕೂಡ ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೇನೆ. ಆದ್ದರಿಂದ ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದಿದ್ದರು.












Click it and Unblock the Notifications