ಶಕ್ತಿ ಯೋಜನೆ: ಬಳ್ಳಾರಿಯಲ್ಲಿ 4.52 ಕೋಟಿ ಮಹಿಳೆಯರ ಪ್ರಯಾಣ
ಬಳ್ಳಾರಿ, ಮೇ 20: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ 'ಶಕ್ತಿ' ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದೊಳಗೆ ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆ ಇದಾಗಿದೆ. ಬಳ್ಳಾರಿ ಜಿಲ್ಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವ್ಯಾಪ್ತಿಗೆ ಸೇರುತ್ತಿದ್ದು, ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿದೆ.
'ಶಕ್ತಿ' ಯೋಜನೆಯಡಿ ಮಹಿಳಾ ವಯಸ್ಕರು ಮತ್ತು ಹೆಣ್ಣು ಮಕ್ಕಳು ಒಳಗೊಂಡು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ನಗರ ಸಾರಿಗೆ ಮತ್ತು ಸಾಮಾನ್ಯ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದು, ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ (ಮಾರ್ಚ್ 2025) 4,52,37,755 ಮಹಿಳೆಯರು 'ಶಕ್ತಿ' ಯೋಜನೆ ಪ್ರಯೋಜನ ಪಡೆದಿದ್ದಾರೆ.

'ಶಕ್ತಿ' ಯೋಜನೆಯ ಜಾರಿಯಾದ ನಂತರ ಜಿಲ್ಲೆಯಲ್ಲಿ ಮಹಿಳಾ ವಯಸ್ಕರು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಒಟ್ಟು ರೂ. 167,99,61,992 ಮೊತ್ತದ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಈ ಮೊತ್ತವು ಬಳ್ಳಾರಿ ವಿಭಾಗಕ್ಕೆ ಪ್ರಮುಖ ಆದಾಯವಾಗಿದೆ. ಜಿಲ್ಲೆಯಲ್ಲಿ ಬಳ್ಳಾರಿ-1, ಬಳ್ಳಾರಿ-2, ಬಳ್ಳಾರಿ-3, ಸಿರುಗುಪ್ಪ, ಕುರುಗೋಡು ಮತ್ತು ಸಂಡೂರು ವಿಭಾಗಗಳಿವೆ.
'ಶಕ್ತಿ' ಯೋಜನೆಯಡಿ ಇದುವರೆಗೆ (ಮಾರ್ಚ್ ಅಂತ್ಯ) ಬಳ್ಳಾರಿ-1 ವಿಭಾಗದಲ್ಲಿ 73,55,413 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದು, ಒಟ್ಟು 30,92,36,224 ರೂ. ಮೊತ್ತದ ಟಿಕೆಟ್ ವಿತರಣೆ ಮಾಡಲಾಗಿದೆ. ಬಳ್ಳಾರಿ-2 ವಿಭಾಗದಲ್ಲಿ 71,14,913 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, 37,89,38,056 ರೂ. ಮೊತ್ತದ ಟಿಕೆಟ್ ವಿತರಿಸಲಾಗಿದೆ.
ಬಳ್ಳಾರಿ-3 ವಿಭಾಗದಲ್ಲಿ 1,05,56,205 ಮಹಿಳಾ ಪ್ರಯಾಣಿಕರು ಸಂಚರಿಸಿದರೆ ಒಟ್ಟು 18,39,41,365 ರೂ. ಮೊತ್ತದ ಟಿಕೆಟ್ ನೀಡಲಾಗಿದೆ. ಸಿರುಗುಪ್ಪ ವಿಭಾಗದ ವ್ಯಾಪ್ತಿಯಲ್ಲಿ 74,18,672 ಮಂದಿ ಮಹಿಳೆಯರು ಸಂಚರಿಸಿದರೆ 31,05,36,366 ರೂ. ಮೊತ್ತದ ಟಿಕೆಟ್ ನೀಡಲಾಗಿದೆ. ಉಳಿದಂತೆ ಕುರುಗೋಡು ವಿಭಾಗದಲ್ಲಿ 43,73,244 ಮಹಿಳಾ ಪ್ರಯಾಣಿಕರು ಸಂಚರಿಸಿದರೆ ರೂ.18,56,36,676 ಮೊತ್ತದ ಟಿಕೆಟ್ ಮತ್ತು ಸಂಡೂರು ವಿಭಾಗದಲ್ಲಿ ಸಂಚರಿಸಿದ 84,19,308 ಮಹಿಳಾ ಪ್ರಯಾಣಿಕರಿಗೆ ರೂ. 31,16,73,305 ಮೊತ್ತದ ಟಿಕೆಟ್ ವಿತರಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
'ಶಕ್ತಿ' ಯೋಜನೆಯ ಮೂಲಕ ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿರುವುದು ಮಾತ್ರವಲ್ಲದೇ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶವೂ ಸಿಕ್ಕಿದೆ.
ಉಚಿತ ಪ್ರಯಾಣದ ಮೊದಲು ಸಾರಿಗೆಗಾಗಿ ಮಾಡುತ್ತಿದ್ದ ವೆಚ್ಚದ ಮೊತ್ತವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಶುಲ್ಕ ಭರಿಸಲು, ಪಠ್ಯ ಪುಸ್ತಕ ಖರೀದಿಸಲು ನೆರವಾಗಿದ್ದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಖಾಸಗಿ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಕುಟುಂಬಗಳನ್ನು ಮತ್ತು ಪೋಷಕರು ತಮ್ಮ ಮಕ್ಕಳನ್ನು ನಿರಂತರವಾಗಿ ಭೇಟಿ ಮಾಡಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ.
ಶಕ್ತಿ ಯೋಜನೆ ಫಲಾನುಭವಿಯಾದ ಕಾವೇರಿ, ಕರ್ಚೇಡು ಗ್ರಾಮ, ಬಳ್ಳಾರಿ ತಾಲ್ಲೂಕು ಮಾತನಾಡಿ, "ದುಡಿಮೆಗಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಕಾರ್ಮಿಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಅನುಕೂಲವಾಗಿದೆ. ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಶಕ್ತಿ ತುಂಬಿದೆ" ಎಂದು ಹೇಳಿದರು.












Click it and Unblock the Notifications