ಬಳ್ಳಾರಿ: ಚುನಾವಣಾ ಉಸ್ತುವಾರಿಯಿಂದ ರಮೇಶ್ ಜಾರಕಿಹೊಳಿ ಎತ್ತಂಗಡಿ
Recommended Video

ಬಳ್ಳಾರಿ, ಅಕ್ಟೋಬರ್ 26: ಡಿ.ಕೆ.ಶಿವಕುಮಾರ್ ಮೇಲೆ ಮುನಿಸು ಬಿಡಲೊಲ್ಲದ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಳ್ಳಾರಿ ಲೋಕಸಭೆ ಉಪಚುನಾವಣೆಯ ಕ್ಷೇತ್ರ ಉಸ್ತುವಾರಿಯಿಂದ ಹೊರದಬ್ಬಲಾಗಿದೆ.
ಬಳ್ಳಾರಿ ಲೋಕಸಭೆ ಉಪಚುನಾವಣೆಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೂಡ್ಲಗಿ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು. ಆದರೆ ರಮೇಶ್ ಅವರು ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಅವರನ್ನು ಉಸ್ತುವಾರಿ ಸ್ಥಾನದಿಂದ ಪಕ್ಕಕ್ಕೆ ಸರಿಸಲಾಗಿದೆ.
ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಚಿತ್ರದುರ್ಗದ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರನ್ನು ನೇಮಿಸಲಾಗಿದೆ. ಇನ್ನುಮುಂದೆ ಕೂಡ್ಲಿಗಿ ಕ್ಷೇತ್ರದ ಚುನಾವಣಾ ಉಸ್ತುವಾರಿ ಅವರೇ ನೋಡಿಕೊಳ್ಳಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕತ್ತಿ ಮಸೆಯುತ್ತಿದ್ದ ರಮೇಶ್ ಜಾರಕಿಹೊಳಿಗೆ ಈ ಕ್ರಮ ಇನ್ನಷ್ಟು ಅಸಮಾಧಾನ ಉಂಟು ಮಾಡುವ ಲಕ್ಷಣಗಳಿದ್ದು, ಮುಂದಿನ ಪರಿಣಾಮ ಏನಾಗಲಿದೆ ಎಂಬುದು ಕುತೂಹಲಕಾರಿಯಾಗಿರಲಿದೆ.

ಕ್ಷೇತ್ರಕ್ಕೆ ಬರದ ರಮೇಶ್ ಜಾರಕಿಹೊಳಿ
ಕೂಡ್ಲಿಗಿ ಕ್ಷೇತ್ರದ ಉಸ್ತುವಾರಿ ಆಗಿದ್ದ ರಮೇಶ್ ಜಾರಕಿಹೊಳಿ ಅವರು ನಾಮಕಾಸ್ತೆಗೆ ಕೇವಲ ಎರಡು ಬಾರಿ ಮಾತ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಸಹ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಥಳೀಯ ಮುಖಂಡರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಅಸಮಾಧಾನ
ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನ ಹೊಂದಿದ್ದಾರೆ. ರಮೇಶ್ ಅವರ ರಾಜಕೀಯ ಕ್ಷೇತ್ರವಾಗಿರುವ ಬೆಳಗಾವಿಯ ಉಸ್ತುವಾರಿ ಸಚಿವರಾಗಿರುವ ಶಿವಕುಮಾರ್ ಅವರು ಜಾರಕಿಹೊಳಿ ಸಹೋದರರ ರಾಜಕೀಯ ವಿರೋಧಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲ ನೀಡಿದ್ದು ಅವರ ಸಿಟ್ಟಿಗೆ ಕಾರಣವಾಗಿದೆ.

ಪ್ರಚಾರ ಸಮಯದಲ್ಲೂ ಮುನಿಸು
ಬಳ್ಳಾರಿ ಲೋಕಸಭೆ ಉಪಚುನಾವಣೆಯ ಒಟ್ಟಾರೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಮೊನ್ನೆಯಷ್ಟೆ ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ತೆರಳಿದಾಗ ಡಿ.ಕೆ.ಶಿವಕುಮಾರ್ ಬಂದ ಕೂಡಲೇ ರಮೇಶ್ ಜಾರಕಿಹೊಳಿ ಅಲ್ಲಿಂದ ತೆರಳಿದ್ದು, ಅವರಿಬ್ಬರ ನಡುವೆ ಬಿರುಕು ದೊಡ್ಡದಾಗಿದೆ ಎಂಬುದಕ್ಕೆ ಉದಾಹರಣೆ ಆಗಿದೆ.

ರಮೇಶ್ ವಿರುದ್ಧ ಕೆಪಿಸಿಸಿಗೆ ದೂರು
ಉಸ್ತುವಾರಿಯಾಗಿ ನೇಮಕಗೊಂಡಿದ್ದರೂ ಸಹ ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಹಾಗೂ ಪಕ್ಷಕ್ಕೆ ಋಣಾತ್ಮಕವಾಗಿ ಕೆಲಸ ಮಾಡುತ್ತಿರುವ ಬಗ್ಗೆ ರಮೇಶ್ ಜಾರಕಿಹೊಳಿ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಶಿಸ್ತು ಕ್ರಮ ಕೈಗೊಳ್ಳುವಂತೆ ಸಲಹೆ ಸಹ ನೀಡಿದ್ದಾರೆ.












Click it and Unblock the Notifications