ಅನಂತ್ ಕುಮಾರ್ ಜೊತೆಗಿನ ನೆನಪುಗಳನ್ನು ಬಿಚ್ಚಿಟ್ಟ ಶ್ರೀರಾಮುಲು
Recommended Video

ಬಳ್ಳಾರಿ, ನವೆಂಬರ್.12: ಅನಂತ್ ಕುಮಾರ್ ಅವರ ನಿಧನಕ್ಕೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಬಳ್ಳಾರಿಯಲ್ಲಿ ಸಂತಾಪ ಸೂಚಿಸಿದ್ದಾರೆ.
ಅನಂತ್ ಕುಮಾರ್ ನಿಧನದಿಂದ ಬಹಳ ಆಘಾತ, ನೋವಾಗಿದೆ. ಬಿಎಸ್ ವೈ ಹಾಗೂ ಅನಂತ್ ಕುಮಾರ್ ಬಿಜೆಪಿಗೆ ಎರಡು ಚಕ್ರಗಳಿದ್ದ ಹಾಗೆ. ಅನಂತ್ ಕುಮಾರ್ ನನ್ನ ಜತೆ ಬೈಕ್ ನಲ್ಲಿ ಸುತ್ತಾಡಿದ್ದಾರೆ. ಹೈ.ಕ. ಭಾಗದಲ್ಲಿ ಪಕ್ಷ ಕಟ್ಟಲು ಸಲಹೆ ನೀಡಿದ್ದಾರೆ.
ಹೋರಾಟದ ಜೀವನ ಅವರದು, ಕಟ್ಟಾ ಆರ್ ಎಸ್ಎಸ್, ಹಿಂದೂವಾದಿ. ದೇಶದ ಉದ್ದಗಲಕ್ಕೂ ಹೋರಾಟ ಮಾಡಿರುವ ಅನಂತ್ ಕುಮಾರ್ ನಾನು ಸಂಸದನಾಗಿದ್ದಾಗ ಸಲಹೆ ಕೊಟ್ಟಿದ್ದಾರೆ. ಯುವಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಅನಂತ್ ಕುಮಾರ್ ಅವರಿಗೆ ಪ್ರಧಾನಿ ಬಳಿ ನಿರಂತರ ಸಂಪರ್ಕ ಇತ್ತು. ಪ್ರಧಾನಿಗೆ ಹತ್ತಿರದ ವ್ಯಕ್ತಿಯಾಗಿದ್ದರು. ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ
ಎಂದು ಶ್ರೀರಾಮುಲು ಪ್ರಾರ್ಥಿಸಿದ್ದಾರೆ.

ರೈಲ್ವೆ ಕುಟುಂಬದಿಂದ ಬಂದವನು
"ನಾನು 2008-09ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡುವ ಸಮಯದಲ್ಲಿ ಅನಂತ್ ಕುಮಾರ್ ಗೇಲಿ ಮಾಡಿದ್ದರು. ನನ್ನ ಕುಟುಂಬದ ಹಿನ್ನೆಲೆ ಕೇಳಿ, ನಿಮ್ಮ ತಂದೆ ಏನು ಮಾಡುತ್ತಿದ್ದಾರೆ ಅಂದಾಗ ರೈಲ್ವೆ ಕೂಲಿ ಎಂದು ಹೇಳಿದೆ. ನಾನು ಕೂಡ ರೈಲ್ವೆ ಕುಟುಂಬದಿಂದ ಬಂದವನು" ಎಂದು ಹೇಳಿದ್ದರು ಎಂದು ಅನಂತ್ ಕುಮಾರ್ ಅವರ ಜೊತೆ ಕಳೆದ ಕ್ಷಣಗಳ ಬಗ್ಗೆ ಶ್ರೀರಾಮುಲು ಮೆಲುಕು ಹಾಕಿದರು.

ಕಾರ್ಯಕರ್ತರಿಗೆ ಹೆಸರಿಟ್ಟು ಕರೆಯುತ್ತಿದ್ದರು
ನಾನು ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡು ಅನಂತ್ ಕುಮಾರ್ ಅವರ ಬಳಿ ಹೋದಾಗ ನಗಿಸಿ, ಕೂಲ್ ಮಾಡುತ್ತಿದ್ದರು. ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಿ ಮತ್ತು ಕಾರ್ಯಕರ್ತರಿಗೆ ಹೆಸರಿಟ್ಟು ಕರೆಯುತ್ತಿದ್ದರು. ಮನೆಯಿಂದ ಊಟ ತರಿಸುತ್ತಿದ್ದರು ಎಂದು ಶ್ರೀರಾಮುಲು ನೆನಪು ಮಾಡಿಕೊಂಡರು.

ಅಂತಿಮ ದರ್ಶನ ಪಡೆದು ಬರುವೆ
ರಾಜ್ಯದ ಜನರು ಅನಂತ್ ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಂತಿಮ ದರ್ಶನ ಪಡೆದು ಬರುವೆ ಎಂದು ಶ್ರೀರಾಮುಲು ಮಾಧ್ಯಮಗಳಿಗೆ ತಿಳಿಸಿದರು.

ಅನಂತ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮೈಸೂರಿನೆಲ್ಲೆಡೆ ಅನಂತ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ. ಸಾರ್ವಜನಿಕರಿಂದಲೂ ಅನಂತ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಅವರ ಆತ್ಮ ಚಿರಾಯೂವಾಗಲೆಂದು ನಗರದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರಾರ್ಥಿಸಲಾಯಿತು.












Click it and Unblock the Notifications