ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಿದರೆ ಉತ್ತಮ: ಸೋಮಶೇಖರ್ ರೆಡ್ಡಿ
ಬಳ್ಳಾರಿ, ಫೆಬ್ರವರಿ 10: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡದಿರೋದು ಬೇಸರವಿದೆ, ಇದು ಕೇವಲ ನನ್ನ ಬೇಡಿಕೆ ಅಲ್ಲಾ ಬದಲಿಗೆ ನಮ್ಮ ವಾಲ್ಮೀಕಿ ಸಮುದಾಯದ ಬೇಡಿಕೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಇಂದು ಮಾತನಾಡಿದ ಸೋಮಶೇಖರ್ ರೆಡ್ಡಿ ಅವರು, ಬಳ್ಳಾರಿ ಜಿಲ್ಲಾ ವಿಭಜನೆಯ ಬಗ್ಗೆ ಸಿಎಂ ಯಡಿಯೂರಪ್ಪನವರು ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ. ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದಿಲ್ಲ ಎಂಬ ಹೇಳಿಕೆ ನಮಗೆ ಸಂತೋಷವಾಗಿದೆ ಎಂದಿದ್ದಾರೆ.
ಇನ್ನು ಬಳ್ಳಾರಿಯ ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲಾ, ಈ ಹಿಂದಿನಿಂದಲೂ ವಿಭಜನೆಗೆ ನಮ್ಮ ವಿರೋಧ ಇದೆ. ಹೀಗಾಗಿ ಜಿಲ್ಲಾ ವಿಭಜನೆ ಬೇಡ ಎಂದಿದ್ದೇವೆ. ಈಗಲೂ ನಾನು ಸಚಿವ ಆನಂದ ಸಿಂಗ್ ಅವರಲ್ಲಿ ಜಿಲ್ಲೆ ವಿಭಜನೆ ಮಾಡದೇ ನಾವೆಲ್ಲಾ ಅಣ್ಣ ತಮ್ಮಂದಿರು ಹಾಗೆ ಇರಬೇಕು ಎನ್ನುವ ಮನವಿ ಮಾಡುವೆ ಎಂದು ಹೇಳಿದರು.

ಇನ್ನು ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸೋಮಶೇಖರ್ ರೆಡ್ಡಿ, ಅವರು ಡಿಸಿಎಂ ಸ್ಥಾನವನ್ನು ಶ್ರೀರಾಮುಲು ಅವರಿಗೆ ನೀಡಬೇಕು, ಅದೇ ರೀತಿ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನೂ ಶ್ರೀರಾಮುಲು ಅವರಿಗೆ ನೀಡಬೇಕು ಎನ್ನುವ ಒತ್ತಾಯ ಮಾಡುತ್ತೇನೆ ಎಂದರು.
ಆನಂದ್ ಸಿಂಗ್ ಅವರಿಗೆ ನೀಡಿದರೂ ನಾನು ಸಂತೋಷ ಪಡುತ್ತೇನೆ, ಲಕ್ಷ್ಮಣ ಸವದಿ ಜಿಲ್ಲಾ ಉಸ್ತುವಾರಿ ಆಗಿ ಮುಂದುವರೆದರೂ ನಮಗೆ ಸಂತೋಷ, ಆದರೆ ಹೆಚ್ಚು ದಿನಗಳ ಕಾಲ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಇರಬೇಕು ಎನ್ನುವ ಮನವಿ ಮಾಡುವೆ ಎಂದಿದ್ದಾರೆ.











Click it and Unblock the Notifications