ಸಿದ್ದರಾಮಯ್ಯ ಒಬ್ಬ ಜೋಕರ್, ಶಕುನಿ, ರಾಕ್ಷಸ, ದ್ರೋಹಿ ಎಂದ ಶ್ರೀರಾಮುಲು
ಬಳ್ಳಾರಿ, ಅಕ್ಟೋಬರ್ 16: ಕಾಂಗ್ರೆಸ್‌ನ ಘಟಾನುಘಟಿ ನಾಯಕರು, ಸಿಎಂಗಳು ಬಳ್ಳಾರಿಗೆ ಬಂದು ಭಾರೀ ದೊಡ್ಡ ಸಮಾವೇಶ ಮಾಡಿದರು, ನಾನು ಸೂಕ್ಷ್ಮವಾಗಿ ಗಮನಿಸಿರುವೆ, ನಿನ್ನೆ ನಡೆದ ಸಮಾವೇಶ ಸರ್ಕಸ್ ಥರ ನಡೆಯಿತು, ಸಿದ್ದರಾಮಯ್ಯನವರು ಈ ಸರ್ಕಸ್‌ನ ಜೋಕರ್‌ನಂತೆ ಕಂಡರು, ಯುದ್ಧಭೂಮಿಯಲ್ಲಿನ ಉತ್ತರಕುಮಾರನಂತೆ ಜಂಭ ಕೊಚ್ಚಿಕೊಂಡ ಉತ್ತರಕುಮಾರ ಎಂದು ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮಾತಿನ ಧಾಟಿಯಲ್ಲಿ ನಮ್ಮ ನಾಯಕರಾದ ಅಮಿತ್ ಶಾ, ಮೋದಿ, ರಾಜ್ಯದ ಸಿಎಂ ಅವರ ಅಭಿವೃದ್ಧಿಯ ಚಕ್ರವ್ಯೂಹ ದಾಟಿ ಆಚೆಗೆ ಬರಲು ಸಾಧ್ಯ ಆಗಿಲ್ಲ ಎಂಬುದು ಕಂಡಿತು ಎಂದರು.
ನಮ್ಮ ಅಭಿವೃದ್ಧಿಯ ಚಕ್ರವ್ಯೂಹ ದಾಟಿ ಹೊರಗೆ ಬರಲಾಗದೆ ಕಾಂಗ್ರೆಸ್‌ನವರು ಚಡಪಡಿಸಿದರು. ಸಿದ್ದರಾಮಯ್ಯ ಈ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದನ್ನು ಪತ್ರಿಕೆಯಲ್ಲಿ ಓದಿದೆ, ಹೌದು ಅವರ ಪಾಪದ ಕೊಡ ತುಂಬಿದೆ, ಹೀಗಾಗಿ ಈ ಚುನಾವಣೆ ಕೊನೆ ಚುನಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ
ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಶಕುನಿ ಇದ್ದಂತೆ, ಅವರ ರಾಜಕೀಯ ಇತಿಹಾಸ ನೋಡಿದರೆ ತಿಳಿಯುತ್ತದೆ, ಜೆಡಿಎಸ್‌ನಲ್ಲಿದ್ದರು, ಬೆಂಕಿ ಹಚ್ಚಿ ಹೊರಗೆ ಬಂದರು, ಕಾಂಗ್ರೆಸ್ಸಿನಲ್ಲಿ ಬೆಂಕಿ ಹಚ್ಚಿದರು, ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು, ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ, ಡಿಕೆಶಿಗೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಬೇರೆ ಪಕ್ಷಗಳ ಮನೆಯ ಬಾಗಿಲು ಬಡಿಯುತ್ತಿದ್ದಾರೆ .
ನನ್ನನ್ನು ಪೆದ್ದ ಎಂದರು, ಅವರ ರಾಹುಲ್‌ರಂತೆ ಸಿದ್ದರಾಮಯ್ಯನಂತೆ ನಾನು ಪೆದ್ದನಲ್ಲ, ನಾನು ಅವರಷ್ಟು ಜಾಣ ಇರಲಿಕ್ಕಿಲ್ಲ, ಆದರೆ ನನ್ನಷ್ಟು ಹೃದಯವಂತಿಕೆ ಅವರಿಗಿಲ್ಲ, ನಾನು ಉಂಡ ಮನೆಗೆ ದ್ರೋಹ ಮಾಡಿದವನಲ್ಲ, ಜನರ ಜೊತೆ ಇರುವವನು ಎಂದರು.

ಅನ್ನ ಕೊಟ್ಟವರ ಮನೆಗೆ ಎರಡು ಬಗೆದವ
ಅವರೊಬ್ಬ ರಾಕ್ಷಸ, ಅವರನ್ನು ಮೈಸೂರಿನ ಜನ ಸೋಲಿಸಿದರು, ಮುಖಕ್ಕೆ ಮಸಿ ಬಳಿದರು ಎಂದು ಹೇಳಿದ ಶ್ರೀರಾಮುಲು, ಅಮಿತ್ ಶಾ, ಮೋದಿ ಮತ್ತು ಆರ್ ಎಸ್ ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಎನ್ನುತ್ತೀರಿ, ನೀವು ಹೋರಾಡಿದ್ದೀರಾ..? ನೀವು ಸಿಎಂ ಆಗಿದ್ದಾಗ ಜಾತಿ ಜಾತಿ ನಡುವೆ ಬೆಂಕಿ ಹಚ್ಚಲಿಲ್ಲವೇ? ಇವತ್ತು ಸತ್ಯ ಹರಿಶ್ಚಂದ್ರನ ಹಾಗೆ ಮಾತಾಡುತ್ತೀರಿ. ನೀವು ಸಿಎಂ ಆಗಿದ್ದಾಗ ನಿಮ್ಮನ್ನು ಜನರು ಮನೆಗೆ ಕಳಿಸುವ ಕೆಲಸ ಮಾಡಿದರು, ನಾನು ನಂಬಿಕೆಗೆ ದ್ರೋಹ ಮಾಡಿಲ್ಲ, ಅನ್ನ ಕೊಟ್ಟವರ ಮನೆಗೆ ಎರಡು ಬಗೆದಿಲ್ಲ ಎಂದರು. ಅಹಿಂದದ ಮುಖ ಇಟ್ಟುಕೊಂಡು ಏನು ಮಾಡಿದಿರಿ? ಖರ್ಗೆಯವರನ್ನು ತುಳಿದಿರಿ, ಪರಮೇಶ್ವರ್ ಅವರನ್ನು ಸೋಲಿಸಿದಿರಿ ಎಂದು ಶ್ರೀರಾಮುಲು ಆರೋಪಿಸಿದರು.

ನೂರು ಪಾದಯಾತ್ರೆ ಆಗಲಿ ನನಗೇನೂ ಆಗಲ್ಲ
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಾರೆಂಬ ಕಾರಣಕ್ಕೆ ಅವರನ್ನೂ ಬ್ಲಾಕ್ ಮೇಲ್ ಮಾಡುತ್ತಿದ್ದೀರಿ, ದಾಖಲೆ ಇದೆ ಎಂದು ಬೇರೆ ಮನೆಯ ಬಾಗಿಲು ತಟ್ಟುವ ಕೆಲಸ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಪಾದಯಾತ್ರೆ ಮಾಡಿದರೂ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಿದರೂ ಈ ನೆಲದ ಜನ ನನ್ನನ್ನು ಕೈಬಿಟ್ಟಿಲ್ಲ, ಇಂತಹ ನೂರು ಪಾದಯಾತ್ರೆ ಆಗಲಿ ನನಗೇನೂ ಆಗಲ್ಲ. ಬಿಜೆಪಿ ಅಧಿಕಾರಕ್ಕೆ ತರಲು ನಾನು 200 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಿಜೆಪಿಯನ್ನು ಗೆಲ್ಲಿಸುವೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇವರು ಕೊಟ್ಟ ಅನುದಾನ ಖರ್ಚಾಗುತ್ತಿರಲಿಲ್ಲ ಎಂದ ಅವರು, ನಮ್ಮ ಸಿಎಂ ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದರು.

ಜನರ ವಿಶ್ವಾಸ ಪ್ರೀತಿ ಗಳಿಸಿರುವ ವ್ಯಕ್ತಿ ನಾನು
ನಾವು ಕೊಟ್ಟ ಮಾತಿನಂತೆ ಎಸ್‌ಸಿ ಎಸ್‌ಟಿ ಮೀಸಲಾತಿ ನೀಡಿದ್ದೇವೆ, ನಾನು ಮಾಡಿದ ಅಭಿವೃದ್ಧಿಗೆ ದಾಖಲೆಗಳಿವೆ, ನಿಮ್ಮ ಹಾಗೆ ಬುರುಡೆ ಬಿಡುವುದಿಲ್ಲ, ನಾನು ಚರ್ಚೆಗೆ ಸಿದ್ಧ, ನೀವು ಉಗ್ರಪ್ಪ ಅವರನ್ನು ಚರ್ಚೆಗೆ ಕಳಿಸುವೆ ಅಂದ್ರಿ, ಉಗ್ರಪ್ಪ ಅವರನ್ನು ಸೋಲಿಸಿ ನಮ್ಮ ಜನ ಅವರನ್ನು ಪಾವಗಡಕ್ಕೆ ಕಳಿಸಿದ್ದಾರೆ. ಸಮಯ ದಿನಾಂಕ ನಿಗದಿ ಮಾಡಿ, ನಾನು ಚರ್ಚೆಗೆ ಸಿದ್ಧ, ಮುನಿಸಿಪಲ್ ಮೈದಾನದಲ್ಲೇ ನಡೀಲಿ ಎಂದ ಶ್ರೀರಾಮುಲು, ಸಿದ್ದರಾಮಯ್ಯ ಅವರೇ ಬರಲಿ, ನಾನು ಅವರಂತಹ ವ್ಯಕ್ತಿ ಅಲ್ಲ ನಿಮ್ಮಷ್ಪು ಜಾಸ್ತಿ ಓದಿಲ್ಲ, ಆದರೆ ಎಲ್ಲ ಜನರ ವಿಶ್ವಾಸ ಪ್ರೀತಿ ಗಳಿಸಿರುವ ವ್ಯಕ್ತಿ ನಾನು ಎಂದರು.

ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ
ಸಿದ್ದರಾಮಯ್ಯ ಯಾವ ಪಕ್ಷದಲ್ಲಿ ಇರುತ್ತಾರೆಯೋ ಅಲ್ಲಿ ಸ್ಥಾನ ಮಾನ ಪಡೆದು ದ್ರೋಹ ಮಾಡಿ ಬಂದಿದ್ದಾರೆ, ಎಲ್ಲ ಕಡೆ ದ್ರೋಹ ಮಾಡಿ ಈಗ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದ ಶ್ರೀರಾಮುಲು, ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂದು ಕಾಂಗ್ರೆಸ್ಸಿನಲ್ಲಿದ್ದಾರೆ, ಆದರೆ ನಾವು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ, ಅಖಂಡ ಬಳ್ಳಾರಿಯ 10 ಕ್ಷೇತ್ರ, ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಸಿದ್ದರಾಮಯ್ಯ ಹೇಗೆಂದರೆ ವಿಷಯವನ್ನು ಅವರೇ ಕ್ರಿಯೇಟ್ ಮಾಡುತ್ತಾರೆ, ಅವರೇ ಮೈಮೇಲೆ ಹಾಕಿಕೊಳ್ಳುತ್ತಾರೆ, ಜನರನ್ನು ದಿಕ್ಕು ತಪ್ಪಿಸುತ್ತಾರೆ, ಮಾತುಗಾರಿಕೆ ಕಲಿತಿದ್ದಾರೆ, ಸುಳ್ಳು ಹೇಳುವುದರಲ್ಲಿ ಅವರು ನಿಪುಣ, ನಂಬಿಕೆಗೆ ಅರ್ಹ ವ್ಯಕ್ತಿ ಅಲ್ಲ, ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡು ಜನರ ನಡುವೆ ಮಾತಾಡುತ್ತಾರೆ, ಅಹಿಂದ ವರ್ಗಗಳಿಗೂ ಏನೂ ಮಾಡಿಲ್ಲ ಎಂದರು.












Click it and Unblock the Notifications