ಕರ್ನಾಟಕದಲ್ಲಿ ನಿಲ್ಲದ ಬಾಣಂತಿಯರ ಸಾವು: ಹೆಣ್ಣು ಮಗುವಿಗೆ ಜನ್ಮನೀಡಿ ಕಣ್ಮುಚ್ಚಿದ ತಾಯಿ
ವಿಜಯನಗರ, ಡಿಸೆಂಬರ್ 29: ರಾಜ್ಯದ ಆರೋಗ್ಯ ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಘಟನೆ ಮಾಸುವ ಮುನ್ನವೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಾಣಂತಿಯರ ಸಾವು ಪ್ರಕರಣ ದಾಖಲಾಗುತ್ತಿದ್ದು, ಇದೀಗ ವಿಜಯನಗರದಲ್ಲಿ ಬಾಣಂತಿ ಸಾವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿದ ಮೂರು ದಿನಗಳ ಬಳಿಕ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪೂರ ಗ್ರಾಮದ ಐಶ್ವರ್ಯಾ (20) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಐಶ್ವರ್ಯಾ ಎನ್ನುವ ಮಹಿಳೆ ಡಿಸೆಂಬರ್ 19ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆ ನೋವಿನಿಂದ ದಾಖಲಾಗಿದ್ದರು. ಸಾಮಾನ್ಯ ಹೆರಿಗೆ ಆಗದ ಕಾರಣ ಐಶ್ವರ್ಯಾಗೆ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಡಿಸೆಂಬರ್ 20ರಂದು ಸಿಸೇರಿಯನ್ ಹೆರಿಗೆ ಮಾಡಲಾಗಿತ್ತು.
ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದರು. ಆದರೆ ಮಗು ಜನಿಸಿ ಮೂರು ದಿನಗಳ ಬಳಿಕ ಐಶ್ವರ್ಯಾಗೆ ವಾಂತಿ ಭೇದಿ ಶುರುವಾಗಿದೆ. ಬೆಳಗ್ಗೆ ತಿಂಡಿಗೆ ಇಡ್ಲಿ ತಿಂದ ಬಳಿಕ ಐಶ್ವರ್ಯಾ ಆರೋಗ್ಯದಲ್ಲಿ ಏರುಪೇರಾಗಿದ್ದು, ಏಕಾಏಕಿ ಮಿತಿಮೀರಿದ ವಾಂತಿ ಶುರುವಾಗಿದೆ. ಗರ್ಭಿಣಿಯ ಆರೋಗ್ಯದ ಪರಿಸ್ಥಿತಿ ಗಮನಿಸಿದ ವಿಜಯನಗರ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ವೈದ್ಯರ ಸೂಚನೆ ಮೇರೆಗೆ ಕುಟುಂಬಸ್ಥರು ಬಾಣಂತಿ ಐಶ್ವರ್ಯಾರನ್ನು ಕೂಡಲೇ ಕೊಪ್ಪಳ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಕೊಪ್ಪಳ ಆಸ್ಪತ್ರೆಗೆ ಬರುತ್ತಿದ್ದಂತೆ ಐಶ್ವರ್ಯಾ ಮೃತಪಟ್ಟಿದ್ದು, ಕುಟುಂಬಸ್ಥರಿಗೂ ಕೂಡ ವಿಚಾರ ತಿಳಿಸಲಾಗಿದೆ. ಕೊಪ್ಪಳ ಆಸ್ಪತ್ರೆಯಲ್ಲಿ ಐಶ್ವರ್ಯಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ಶಂಕರ್ ನಾಯ್ಕ ಮಾಹಿತಿ ನೀಡಿದ್ದು, ವಾಂತಿ-ಭೇದಿಯಿಂದ ಮೆಟಾಬೋಲಿಕ್ ಆ್ಯಸಿಡೋಟಸ್ ಆಗಿ ಕಿಡ್ನಿ ವೈಫಲ್ಯದಿಂದ ಸಾವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ. ಬಾಣಂತಿ ಸಾವಿಗೆ ಕಾರಣ ಏನು ಎಂದು ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications