Actor Darshan: ದರ್ಶನ್‌ಗೆ ಜಾಮೀನು; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಲಾಯರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 100ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್‌ಗೆ ಜಾಮೀನು ಯಾವಾಗ ಸಿಗುತ್ತದೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ಮಂಗಳವಾರ ವಕೀಲರು ನಟ ದರ್ಶನ್‌ರನ್ನು ಬಳ್ಳಾರಿ ಭೇಟಿ ಮಾಡಿದರು.
ದರ್ಶನ್‌ರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್ ಪರ ವಕೀಲರು, ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಸೆಷನ್ಸ್ ಕೋರ್ಟ್‌ನಲ್ಲೇ ದರ್ಶನ್‌ಗೆ ಜಾಮೀನು ಸಿಗುವ ವಿಶ್ವಾಸವಿದೆ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.

57ನೇ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದೇನೆ, ವಿಶೇಷ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಸಲು ಸಮಯ ತೆಗೆದುಕೊಂಡಿದ್ದಾರೆ, ಕಾನೂನು ಪ್ರಕಾರ ಏನು ಪ್ರಕ್ರಿಯೆ ನಡೆಯಬೇಕು ಅದು ನಡೆಯುತ್ತಿದೆ. ಇದು 302 ಪ್ರಕರಣ ಆಗಿರುವ ಕಾರಣ ಸೆಷನ್ಸ್ ಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಬೇಕು, ಒಂದು ವೇಳೆ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದರೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿಲ್ಲ ಎಂದರೆ ಕೋರ್ಟ್ ಆದೇಶ ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಚಿಂತಿಸುತ್ತೇವೆ. ಆದರೆ ನಮಗೆ ಸೆಷನ್ಸ್ ಕೋರ್ಟ್‌ನಲ್ಲೇ ಜಾಮೀನು ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ದರ್ಶನ್‌ಗೆ ಜಾಮೀನು ಸಿಗುವ ಬಗ್ಗೆ ವಕೀಲರು ಆತ್ಮವಿಶ್ವಾಸದಿಂದ ಇರುವುದನ್ನು ನೋಡಿದ ದರ್ಶನ್ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ದರ್ಶನ್ ಬಿಡುಗಡೆಗಾಗಿ ರಾಜ್ಯಾದ್ಯಂತ ಅವರ ಅಭಿಮಾನಿಗಳು ದೇವರಿಗೆಲ್ಲಾ ಕೈಮುಗಿಯುತ್ತಿದ್ದಾರೆ. ದರ್ಶನ್ ಆಚೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಈಗ ವಕೀಲರು ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದು ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದೆ.
ಜೈಲಾಧಿಕಾರಿಗಳ ವಿರುದ್ಧ ಅಸಮಾಧಾನ
ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಕೊಡುತ್ತಿಲ್ಲ ಎಂದು ವಕೀಲರು ಜೈಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ತುಂಬಾ ಬೆನ್ನು ನೋವು ಇರುವ ಕಾರಣ ಜೈಲಿನ ನಿಯಮಗಳ ಅನುಸಾರ ಅವರಿಗೆ ಮೆಡಿಕಲ್ ಬೆಡ್ ಕೊಡುವಂತೆ ಮನವಿ ಮಾಡಿದ್ದೆವು, ಆದರೆ ಜೈಲಾಧಿಕಾರಿಗಳು ಇನ್ನು ಬೆಡ್ ಕೊಟ್ಟಿಲ್ಲ ಎಂದರು. ಈಗ ಅಧಿಕಾರಿಗಳಿಗೆ ಜೈಲಿನ ನಿಯಮಗಳ ಬಗ್ಗೆ ಮನವರಿಗೆ ಮಾಡಿಕೊಟ್ಟಿದ್ದೇವೆ, ದರ್ಶನ್‌ಗೆ ಬೆಡ್ ಕೊಡುವ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಚರ್ಚೆ ನಡೆಸುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಕೊಟ್ಟಿದೆ ಎನ್ನುವ ಕಾರಣಕ್ಕೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ದರ್ಶನ್‌ರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡುವ ಉದ್ದೇಶವಿಲ್ಲ ಎಂದು ದರ್ಶನ್ ಪರ ವಕೀಲರು ಸ್ಪಷ್ಟನೆ ಕೊಟ್ಟಿದ್ದಾರೆ.












Click it and Unblock the Notifications