ಪರಮೇಶ್ವರ ನಾಯ್ಕ್ ಮಗನ ಮದುವೆ; ಕ್ವಾರಂಟೈನ್ ಕೂಡ ಉಲ್ಲಂಘನೆಯಾಗಿದೆಯಾ?
ಬಳ್ಳಾರಿ, ಜೂನ್ 16: ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಮಗನ ಮದುವೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ವಿಚಾರವಾಗಿ ನಿನ್ನೆ ಎಫ್ ಐಆರ್ ದಾಖಲಿಸಲಾಗಿತ್ತು. ಇದೀಗ ಕ್ವಾರಂಟೈನ್ ವಿಚಾರವಾಗಿಯೂ ತನಿಖೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ನಿನ್ನೆ ಶಾಸಕ ಪರಮೇಶ್ವರ್ ನಾಯ್ಕ ಅವರ ಮಗ ಅವಿನಾಶ್ ಅವರ ಮದುವೆಯನ್ನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮದ ಲಕ್ಷ್ಮೀಪುರ ತಾಂಡಾದಲ್ಲಿ ನಡೆಸಲಾಗಿತ್ತು. ಮದುವೆ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ಮುಖಂಡರಾದ ಡಾ.ಪರಮೇಶ್ವರ್ ಮುಂತಾದವರು ಭಾಗವಹಿಸಿದ್ದರು. ಜೊತೆಗೆ ನೂರಾರು ಜನರು ಸೇರಿದ್ದು, ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಲಾಗಿತ್ತು.
ಇದೀಗ ಕ್ವಾರಂಟೈನ್ ವಿಚಾರದಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತಿದೆ. ಮಗನಿಗೆ ಆಂಧ್ರದ ಯುವತಿಯ ಜೊತೆ ಮದುವೆ ಮಾಡಿಸಿದ್ದು, ಆಂಧ್ರದ ಅನಂತಪುರಂ ಜಿಲ್ಲೆಯ ಕಾಪರ್ಲಪಲ್ಲಿಯಿಂದ ಸುಮಾರು 300 ಜನರು ಮದುವೆಗೆ ಬಂದಿದ್ದರು. ಸೊಸೆ ಜೊತೆ ಬಂದ ಸಂಬಂಧಿಕರಿಗೆ ಕ್ವಾರಂಟೈನ್ ನಲ್ಲಿ ಇಟ್ಟಿದ್ದರಾ ಎಂಬ ಪ್ರಶ್ನೆ ಎದ್ದಿದೆ. ಬೇರೆ ರಾಜ್ಯದಿಂದ ಬಂದರೆ ಅವರಿಗೆ ಹೋಮ್ ಕ್ವಾರಂಟೈನ್ ನಲ್ಲಿ ಇಡುವುದು ನಿಯಮ. ಆದರೆ ಆಂಧ್ರದಿಂದ ಬಂದ ಸಂಬಂಧಿಕರನ್ನು ಶಾಸಕರು ಕ್ವಾರಂಟೈನ್ ನಲ್ಲಿ ಇಟ್ಟಿದ್ದರಾ ಎಂಬ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಡಿಸಿ ನಕುಲ್ ತಿಳಿಸಿದ್ದಾರೆ.

ಮದುವೆಯಲ್ಲಿ ನಿಯಮ ಉಲ್ಲಂಘನೆ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. 50 ಜನರ ಮೇಲ್ಪಟ್ಟು ಭಾಗಿಯಾಗಬಾರದೆಂಬ ನಿಯಮ ಇದೆ. ಆದರೆ ನಿಯಮ ಉಲ್ಲಂಘನೆ ಮಾಡಲಾಗಿದೆ. ನಾವು ದೂರು ಕೊಟ್ಟಿದ್ದೇವೆ. ಕ್ವಾರಂಟೈನ್ ಉಲ್ಲಂಘನೆಯಾಗಿದೆಯಾ ಪರೀಕ್ಷಿಸುತ್ತಿದ್ದೇವೆ. ನ್ಯಾಯಾಲಯದ ತನಿಖೆ ನಂತರ ಕ್ರಮ ಆಗುತ್ತದೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಹರಪನಹಳ್ಳಿಗೆ ಭೇಟಿ ನೀಡಿದ್ದು, ಚರ್ಚೆ ನಡೆಸಿದ್ದಾರೆ. ಮದುವೆಯಲ್ಲಿ ಬಹಳ ಜನ ಸೇರಿದ್ದಾರೆಂದು ನಮಗೆ ದೂರು ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.












Click it and Unblock the Notifications