ಆಂಧ್ರದಲ್ಲಿ ಹಾಲಶ್ರೀ ಸ್ವಾಮೀಜಿ ಕಾರು ಅಪಘಾತ
ಬಳ್ಳಾರಿ, ಮಾರ್ಚ್ 12: ಆಂಧ್ರ ಪ್ರದೇಶದ ಗುತ್ತಿ-ಅನಂತಪುರಂ ರಾಷ್ಟ್ರೀಯ ಹೆದ್ದಾರಿ ಬಳಿ ಹಾಲಶ್ರೀ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಅಪಘಾತಕ್ಕೀಡಾಗಿದ್ದು, ಹಾಲಶ್ರೀ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅವರೇ ಕಾರು ಅಪಘಾತದಲ್ಲಿ ಗಾಯಗೊಂಡವರು ಎಂದು ತಿಳಿದು ಬಂದಿದ್ದು, ಕೆಲಸದ ನಿಮಿತ್ತವಾಗಿ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ಗೆ ಸ್ವಾಮೀಜಿ ಅವರು ತೆರಳಿದ್ದರು.
ಇಂದು ಬೆಳಗಿನ ಜಾವ ಕೆಲಸ ಮುಗಿಸಿಕೊಂಡು ಬಳ್ಳಾರಿಗೆ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ಸ್ವಾಮೀಜಿಯವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಸ್ವಾಮೀಜಿ ಅವರ ಕಾರು ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಸ್ವಾಮೀಜಿ ಅವರು ಸೇರಿದಂತೆ ಕಾರು ಚಾಲಕ ಹೈದ್ರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆ ಕಾರಣ ಎಂದು ತಿಳಿದು ಬಂದಿದ್ದು, ಅನಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications