ಸಂಡೂರಿನಲ್ಲಿ ಜನಾರ್ದನ ರೆಡ್ಡಿಗೆ ಭವ್ಯ ಸ್ವಾಗತ, ಉಪ ಚುನಾವಣೆಗೆ ತಯಾರಾದ್ರು ರೆಡ್ಡಿ
ಬಳ್ಳಾರಿ, ಅಕ್ಟೋಬರ್ 06: ಬಳ್ಳಾರಿಗೆ ಭೇಟಿ ನೀಡಲು ಗಂಗಾವತಿ ಶಾಸಕ, ಬಿಜೆಪಿ ನಾಯಕ ಜನಾರ್ದನ ರೆಡ್ಡಿಗೆ ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ನವರಾತ್ರಿಯ ಮೊದಲ ದಿನ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ರೆಡ್ಡಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಉಪ ಚುನಾವಣೆ ನಡೆಯಲಿರುವ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಸಹ ಜನಾರ್ದನ ರೆಡ್ಡಿ ಭೇಟಿ ಕೊಟ್ಟಿದ್ದು, ಚುನಾವಣೆ ಕಾವು ಹೆಚ್ಚಿಸಿದ್ದಾರೆ.
ಸೆಪ್ಟೆಂಬರ್ 30ರಂದು ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿತ್ತು. 14 ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಯಾವುದೇ ನಿರ್ಬಂಧವಿಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ. ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.

ಬಳ್ಳಾರಿಗೆ ಆಗಮಿಸಿದ 2ನೇ ದಿನ ಜನಾರ್ದನ ರೆಡ್ಡಿ ಸಂಡೂರಿಗೆ ಭೇಟಿ ನೀಡಿದರು. ಮೊದಲು ತಾರಾ ನಗರದಲ್ಲಿ, ಸಂಡೂರಿನ ವಿಜಯ ಸರ್ಕಲ್‌ನಲ್ಲಿ ಮಂಡಲದ ವತಿಯಿಂದ ಹಾಗೂ ಮುಖಂಡ ಕೆ. ಎಸ್. ದಿವಾಕರ್ ಹಾಗೂ ಅವರ ಬೆಂಬಲಿಗರು ಆತ್ಮೀಯವಾಗಿ ಜನಾರ್ದನ ರೆಡ್ಡಿ ಸ್ವಾಗತಿಸಿದರು. ಹಲವು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮಳೆಯಿಂದ ಆದ ಹಾನಿಯನ್ನು ವೀಕ್ಷಿಸಿದರು. ಸಂಡೂರಿನ ನಾರಿ ಹಳ್ಳ ಡ್ಯಾಂ ಭರ್ತಿಯಾಗಿದ್ದು, ಸಂಡೂರಿನ ಗ್ರಾಮಗಳ ಜನತೆಗೆ ಮುಂಜಾಗ್ರತ ಕ್ರಮವಾಗಿ ಎಚ್ಚರಿಕೆ ನೀಡದೆಯೇ ಡ್ಯಾಂ ಗೇಟ್ ತೆರೆಯಲಾಗಿದೆ. ಇದರಿಂದಾಗಿ ಕುರೆಕೊಪ್ಪ ಗ್ರಾಮದ ಸುಮಾರು 400 ಎಕರೆ, ಹೊಸಪುರ ಗ್ರಾಮದ 400 ಎಕರೆ ಬೆಳೆ ನಾಶವಾಗಿ, ಅನೇಕ ಪ್ರದೇಶಗಳು ಜಲಾವೃತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ ನೀರಿನಲ್ಲಿ ಜನರು ಸಿಲುಕಿಕೊಂಡಿರುದು ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಮಾತನಾಡಿ ಜನರ ರಕ್ಷಣೆ ಮಾಡಿಸಿದ್ದಾರೆ. ಬೆಳೆ ನಾಶವಾಗಿರುವ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಸಂಡೂರು ಉಪ ಚುನಾವಣೆ: ಸಂಡೂರು ಕ್ಷೇತ್ರದ ಉಪ ಚುನಾವಣೆ ಎದುರಾಗಿರುವಾಗಲೇ ಜನಾರ್ದನ ರೆಡ್ಡಿ ಬಳ್ಳಾರಿ ಮತ್ತು ಸಂಡೂರಿಗೆ ಭೇಟಿ ನೀಡಿದ್ದಾರೆ. ಆದ್ದರಿಂದ ಉಪ ಚುನಾವಣೆಯ ಕದನ ಕುತೂಹಲಕ್ಕೆ ಕಾರಣವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕಾಂಗ್ರೆಸ್ ವಶವಾಗಿತ್ತು. ಆದರೆ ಈಗ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಕ್ಷೇತ್ರವನ್ನು ಮತ್ತೆ ಬಿಜೆಪಿಗೆ ತಂದು ಕೊಡುವ ಪಣ ತೊಟ್ಟಿದ್ದಾರೆ.
ಸುಪ್ರೀಂಕೋರ್ಟ್ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡಿದ ಬಳಿಕ ಮಾತನಾಡಿದ್ದ ಜನಾರ್ದನ ರೆಡ್ಡಿ, "ಸಂಡೂರು ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಸಂಡೂರು ಉಪ ಚುನಾವಣೆಗೆ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.
2023ರ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇ. ತುಕಾರಾಂ 85,223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ 49,701 ಮತಗಳನ್ನು ಪಡೆದು ಸೋಲು ಕಂಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದ ಬಳಿಕ ಇ. ತುಕಾರಾಂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ಉಪ ಚುನಾವಣೆ ಎದುರಾಗಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ, ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಬಿ. ಶ್ರೀರಾಮುಲು ಸಂಡೂರು ಕ್ಷೇತ್ರದ ಅಭ್ಯರ್ಥಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬಿಜೆಪಿ ನಾಯಕರು ಬಿ. ಶ್ರೀರಾಮುಲು ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮಿಸಿರುವುದು ಬಿಜೆಪಿಗೆ ಹೆಚ್ಚಿನ ಬಲವನ್ನು ತುಂಬಿದೆ. ಪಕ್ಷದ ನಾಯಕರು ಸಂಡೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ಅವರಿಗೆ ಟಾಸ್ಕ್ ನೀಡುವ ನಿರೀಕ್ಷೆ ಇದೆ.












Click it and Unblock the Notifications