ಸಿಬಿಐ ಅಧಿಕಾರಿಗಳಿಂದ ನನಗೆ ಕಿರುಕುಳ; ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಆತಂಕ
ಬಳ್ಳಾರಿ, ಅಕ್ಟೋಬರ್, 03: ''ಕಳೆದ 12 ವರ್ಷಗಳಿಂದ ನನ್ನ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ ತ್ವರಿತಗತಿಯಲ್ಲಿ ನನ್ನ ಕೇಸ್ ನಡೆಯುತ್ತಿಲ್ಲ. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ'' ಎಂದು ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ.
ನವರಾತ್ರಿಯ ಹಿನ್ನೆಲೆ ನಗರದ ಆದಿ ದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದ್ದು, ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷ ಕಳೆದಿವೆ. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು ಪದೇ ಪದೇ ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ದಿನ ವಿಚಾರಣೆ ನಡೆಸುವಂತೆ ಕೊರ್ಟ್‌ಗೆ ಕೇಳಿದ್ದೇನೆ. ಮೂರ್ನಾಲ್ಕು ತಿಂಗಳಲ್ಲೇ ಪ್ರಕರಣ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ ಎಂದು ಹೇಳಿದರು.
ದೇಶಕ್ಕೆ ಒಳ್ಳೆಯದಾಗಲಿ ಎಂದು ಬೇಡುವೆ
ಸುಪ್ರೀಂ ಕೊರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೆ. ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸುವುದಾಗಿ ಬೇಡಿಕೊಂಡಿದ್ದೆ. ಹೀಗಾಗಿ ಇಂದು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆಯದಾಗಲಿ ಎಂದು ದೇವಿಗೆ ಪೂಜೆ ಸಲ್ಲಿಸಿದ್ದೇನೆ. ಕಳೆದ ಹದಿನಾಲ್ಕು ತಿಂಗಳಿನಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ ಎಂದು ಹೇಳಿದ ರೆಡ್ಡಿ, ಸಾರ್ವಜನಿಕವಾಗಿ ನಾನು ಎಲ್ಲೂ ಬರುತ್ತಿಲ್ಲ. ಆದರೂ ಸಿಬಿಐನಿಂದ ನನಗೆ ಕಿರುಕುಳ ಆಗುತ್ತಿದೆ. ರಾಜಕೀಯ ವಿಚಾರವಾಗಿ ಅತೀ ಶೀಘ್ರದಲ್ಲಿ ದುರ್ಗಾ ತಾಯಿ ದಾರಿ ತೋರಿಸುತ್ತಾಳೆ. ರಾಜಕೀಯಕ್ಕೆ ಮರಳುವ ಬಗ್ಗೆ ಶೀಘ್ರದಲ್ಲಿಯೇ ತಿಳಿಸುತ್ತೇನೆ ಎಂದರು.

ಪುತ್ರ ಕಿರೀಟಿ ನಟನೆ ಜ್ಯೂನಿಯರ್ ಚಿತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ನಾಲ್ಕು ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದೆ. ಜೂನಿಯರ್ ಸಿನಿಮಾ ಈಗಾಗಲೇ ಶೇಕಡಾ 70ರಷ್ಟು ಚಿತ್ರೀಕರಣ ಮುಗಿದಿದೆ. ಡಿಸೆಂಬರ್ ಒಳಗೆ ಚಿತ್ರೀಕರಣ ಪೂರ್ಣಗೊಂಡು, ಫೆಬ್ರವರಿ ತಿಂಗಳಿನಲ್ಲಿ ಜೂನಿಯರ್ ಚಿತ್ರ ತೆರೆ ಕಾಣಲಿದೆ. ಆಂಧ್ರ- ಕರ್ನಾಟಕ ಗಡಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಡಿ ಒತ್ತುವರಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯ, ಅನ್ಯಾಯವನ್ನು ಕೋರ್ಟ್ ತೀರ್ಮಾನಿಸಲಿದೆ ಎಂದು ಹೇಳಿದರು.












Click it and Unblock the Notifications