ಕೊಟ್ಟೂರು ರಥೋತ್ಸವ; ಪಾದಯಾತ್ರಿಗಳು, ಭಕ್ತರಿಗೆ ನಿಷೇಧ
ವಿಜಯನಗರ, ಫೆಬ್ರವರಿ 10; ಕೊಟ್ಟೂರು ಪಟ್ಟಣದ ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಫೆಬ್ರವರಿ 25ರಂದು ಸಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನ, ಸರಳವಾಗಿ ಪೂಜೆ ಸಲ್ಲಿಸಿ ಆಚರಿಸಲು ತೀರ್ಮಾನಿಸಲಾಗಿದೆ.
ಗುರುವಾರದಂದು ಹಗರಿಬೊಮ್ಮನಹಳ್ಳಿ ಶಾಸಕರ ಭೀಮಾನಾಯ್ಕ ಹಾಗೂ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅಧ್ಯಕ್ಷತೆಯಲ್ಲಿ ಕೊಟ್ಟೂರು ಗುರುಬಸವೇಶ್ವರ ಸ್ವಾಮಿಯ ರಥೋತ್ಸವದ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, "ಕೋವಿಡ್-19ನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಫೆಬ್ರವರಿ 25ರಂದು ನಡೆಯಲಿರುವ ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಧಾರ್ಮಿಕ ವಿಧಿ ವಿಧಾನದಿಂದ ಸರಳವಾಗಿ ಪೂಜೆ ಸಲ್ಲಿಸಿ ಆಚರಿಸಲಾಗುತ್ತದೆ. ಸರ್ಕಾರದ ಮಾರ್ಗ ಸೂಚಿಯಂತೆ ಹೊರಗಿನ ಪಾದಯಾತ್ರಿಗಳಿಗೆ, ಭಕ್ತಾಧಿಗಳಿಗೆ ನಿಷೇಧ ಹೇರಲಾಗಿದೆ" ಎಂದರು.

"ರಾಜ್ಯ ಸರ್ಕಾರದ ಆದೇಶದಂತೆ ಹೆಚ್ಚು ಜನರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ರಾಜ್ಯದ ವಿವಿಧ ಜಿಲ್ಲೆಗಳು, ಹಳ್ಳಿಗಳಿಂದ ಬರುವ ಕೊಟ್ಟೂರು ಬಸವೇಶ್ವರನ ಭಕ್ತರಿಗೆ ಈ ಬಾರಿ ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಸರ್ಕಾರದ ಆದೇಶದಂತೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಜಾತ್ರೆ, ಉತ್ಸವವನ್ನು ಸರಳವಾಗಿ ಆಚರಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ವ್ಯಾಪರ ವಹಿವಾಟು ನಡೆಯದಂತೆ, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಲು ಚೆಕ್ ಪೋಸ್ಟ್ ಹಾಕಲಾಗುವುದು" ಎಂದರು.
ಶಾಸಕರರಾದ ಭೀಮಾನಾಯ್ಕ ಮಾತನಾಡಿ, "ಕಳೆದ ವರ್ಷದಂತೆ ಈ ವರ್ಷ ಸಹ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಸರ್ಕಾರದ ನಿಯಗಳನ್ನು ಅನುಸರಿಸಿ ರಥೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು" ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ. ಎಂ. ಹರ್ಷವರ್ಧನ ಮಾತನಾಡಿ, "ಕೊಟ್ಟುರೇಶ್ವರ ಸ್ವಾಮಿಯ ಪವಾಡ ರಾಜ್ಯದ ಪ್ರತಿ ಮೂಲೆ ಮೂಲೆಗೂ ತಿಳಿದಿದೆ. ಆದ್ದರಿಂದ ಜಿಲ್ಲಾಡಳಿತದ ಷರತ್ತುಗಳಿಗೆ ಪಟ್ಟಣದ ಜನತೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಸಮಸ್ಯೆಯಾಗದಂತೆ ರಥೋತ್ಸವ ನಡೆಸುತ್ತೇವೆ" ಎಂದರು.
ಮೈಲಾರ ಕಾರ್ಣಿಕಕ್ಕೂ ಭಕ್ತರಿಗೆ ನಿಷೇಧ; ವಿಜಯನಗರ ಜಿಲ್ಲಾಡಳಿತ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ವಾರ್ಷಿಕ ಜಾತ್ರಾ ಕಾರ್ಣಿಕೋತ್ಸವ ಮತ್ತು ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ವಾರ್ಷಿಕ ಜಾತ್ರೆಗೂ ಭಕ್ತರಿಗೆ ನಿಷೇಧ ಹೇರಿದೆ. ಜಾತ್ರೆಗಳಿಗೆ ವಿಶೇಷ ಬಸ್ಸುಗಳನ್ನು ಹಾಗೂ ಹೆಚ್ಚುವರಿ ಬಸ್‍ಗಳು ಓಡಿಸದಂತೆ ಜಿಲ್ಲಾ ಅಪರ ದಂಡಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿ ಮಹೇಶಬಾಬು ಸಾರಿಗೆ ನಿಮಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ರೂಟ್ ಬಸ್ಸುಗಳನ್ನು ಹೊರತುಪಡಿಸಿ ಹೆಚ್ಚುವರಿ ಬಸ್ಸುಗಳನ್ನು ಮೈಲಾರ/ ಕುರುವತ್ತಿ ಗ್ರಾಮಕ್ಕೆ ಓಡಿಸಬಾರದೆಂದು ಹೊಸಪೇಟೆ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಗದಗ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಫೆಬ್ರವರಿ 8 ರಿಂದ ಫೆ.19ರವರೆಗೆ ನಡೆಯಲಿದೆ. ಫೆಬ್ರವರಿ 18ರಂದು ಕಾರ್ಣಿಕೋತ್ಸವ ನಡೆಯಲಿದೆ. ಭಕ್ತರಿಗೆ ಪ್ರವೇಶ ಇಲ್ಲದಿದ್ದರೂ ಕಾರ್ಣಿಕ ಸ್ಪಷ್ಟವಾಗಿ ಕೇಳುವಂತೆ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ.
ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆಬ್ರವರಿ 25ರಿಂದ ಮಾರ್ಚ್ 3ರ ತನಕ ನಡೆಯಲಿದ್ದು, ಮಾರ್ಚ್ 2 ರಂದು ರಥೋತ್ಸವ ನಡೆಯಲಿದೆ.












Click it and Unblock the Notifications