Darshan Bail: ಬಳ್ಳಾರಿ ಜೈಲಧಿಕಾರಿಗಳ ವಿರುದ್ಧ ದರ್ಶನ್ ಪರ ವಕೀಲರ ಅಸಮಾಧಾನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸದ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ಈ ಬೆನ್ನಲ್ಲೇ ದರ್ಶನ್ ಪರ ವಕೀಲರು ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಮಯದಲ್ಲಿ ಬಳ್ಳಾರಿ ಜೈಲು ಸಿಬ್ಬಂದಿ ವಿರುದ್ಧ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿ ನಟ ದರ್ಶನ್‌ಗೆ ಸಿಗಬೇಕಾಗ ಮೂಲ ಸೌಕರ್ಯಗಳು ಸಿಗುತ್ತಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಕೀಲರು, ಈ ಬಗ್ಗೆ ಜೈಲಧಿಕಾರಿ ಲತಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು. ದರ್ಶನ್ ಅವರಿಗೆ ಮೊದಲಿನಿಂದಲೂ ಬೆನ್ನು ನೋವು ಇದೆ, ಜೈಲಿನ ನಿಯಮಗಳ ಪ್ರಕಾರವೇ ಮೂಲಭೂತ ಸೌಕರ್ಯಗಳು ಏನೆಲ್ಲಾ ಕೊಡಬೇಕು, ಅದನ್ನು ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಹೊಸ ನಿಯಮಗಳ ಬಗ್ಗೆ ಜೈಲಧಿಕಾರಿಗಳಿಗೆ ಮಾಹಿತಿ ಇಲ್ಲ ಎನಿಸುತ್ತದೆ, ಅದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ದರ್ಶನ್‌ಗೆ ಮಾತ್ರವಲ್ಲ, ಜೈಲಿನಲ್ಲಿರುವ ಆರೋಪಿ / ಅಪರಾಧಿಗಳಿಗೆ ಏನೆಲ್ಲಾ ಸೌಕರ್ಯ ಸಿಗಬೇಕು ಅದನ್ನು ಜೈಲಧಿಕಾರಿಗಳು ಒದಗಿಸಬೇಕು ಎಂದು ಒತ್ತಾಯಿಸಿದರು.
ಆರೋಪಿ/ಅಪರಾಧಿಗೆ ಹಾಸಿಗೆ, ತಲೆದಿಂಬು, ಕನ್ನಡಿ, ಶುದ್ಧೀಕರಿಸಿದ ನೀರು, ಊಟ ಎಲ್ಲವನ್ನೂ ಕೊಡಲೇಬೇಕು ಎಂದರು. ನಮ್ಮ ಹತ್ತಿರ ಇರುವ ಮ್ಯಾನುಯಲ್ ಅನ್ನು ಕೊಟ್ಟಿದ್ದೇವೆ, ಪತ್ರದ ಮೂಲಕ ಕೂಡ ಮನವಿ ಕೊಟ್ಟಿದ್ದೇವೆ. ಇನ್ನುಮುಂದೆ ದರ್ಶನ್‌ಗೆ ಕೊಡಬೇಕಾದ ಸೌಲಭ್ಯ ಕೊಡದೇ ಇದ್ದರೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದರು.
ಚೇರ್ ಮತ್ತು ಬೆಡ್‌ಗೆ ಬೇಡಿಕೆ
ದರ್ಶನ್‌ಗೆ ಬೆನ್ನುನೋವು ಇರುವ ಕಾರಣ ಅವರಿಗೆ ಮೆಡಿಕಲ್ ಬೆಡ್ ಕೊಡಬೇಕು. ಅದನ್ನು ಜೈಲಧಿಕಾರಿಗಳು ಕೊಟ್ಟಿಲ್ಲ ಅದನ್ನು ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು. ಜೈಲಧಿಕಾರಿಗಳು ಎರಡು ದಿನ ಸಮಯ ಕೇಳಿದ್ದಾರೆ, ಎರಡು ದಿನಗಳಲ್ಲಿ ಅವರು ಮೆಡಿಕಲ್ ಬೆಡ್ ಕೊಡದೇ ಇದ್ದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದರು.
ದರ್ಶನ್ ಜೊತೆ ಮಹತ್ವದ ಚರ್ಚೆ
ದರ್ಶನ್‌ಗೆ ಜಾಮೀನು ಕೊಡಿಸಲು ವಕೀಲರ ತಂಡ ಶ್ರಮಿಸುತ್ತಿದೆ. ಹಲವು ಅರ್ಜಿಗಳಿಗೆ ನಟ ದರ್ಶನ್ ಸಹಿ ಬೇಕಿದ್ದರಿಂದ ಮತ್ತು ಕೆಲವು ವಿಚಾರಗಳನ್ನು ದರ್ಶನ್‌ರಿಂದ ಪಡೆದುಕೊಳ್ಳಬೇಕಿದ್ದ ಕಾರಣ ಇಂದು ಜೈಲಿನಲ್ಲಿ ದರ್ಶನ್‌ರನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಕೀಲರು ಭೇಟಿ ಮಾಡಿದ್ದಾರೆ.
ಜೈಲು ಸಂದರ್ಶಕರ ಕೊಠಡಿಯಲ್ಲಿ ವಕೀಲರನ್ನು ಭೇಟಿ ಮಾಡಿರುವ ದರ್ಶನ್, ಜಾಮೀನು ಅರ್ಜಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೋಮವಾರ ನಡೆದ ವಿಚಾರಣೆ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ. ಸಾಕ್ಷಿ, ಕಾನೂನು ಹೋರಾಟದ ಬಗ್ಗೆ ದರ್ಶನ್ ಮತ್ತು ವಕೀಲರು ಚರ್ಚೆ ನಡೆಸಿದ್ದಾರೆ.












Click it and Unblock the Notifications