Darshan Bail: ಸೋಮವಾರ ದರ್ಶನ್ ಜಾಮೀನು ಅರ್ಜಿ ವಿಚಾರಣೆ; ದಸರಾ ಹಬ್ಬದ ವೇಳೆಗೆ ಬಿಡುಗಡೆ?
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬೇಗನೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ 27ರಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕಿತ್ತು, ಆದರೆ ದರ್ಶನ್ ಪರ ಹಿರಿಯ ವಕೀಲರು ಕೋರ್ಟ್‌ಗೆ ಹಾಜರಾಗದ ಕಾರಣ, ವಿಚಾರಣೆ ಮುಂದೂಡುವಂತೆ ಸಹಾಯಕ ವಕೀಲರು ಮನವಿ ಮಾಡಿದ್ದರಿಂದ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30 (ಸೋಮವಾರ) ಕ್ಕೆ ಮುಂದೂಡಲಾಯಿತು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳು ಆಗುತ್ತಾ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅಲ್ಲಿ ಐಷಾರಾಮಿ ಸೌಲಭ್ಯ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದ ನಂತರ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದೀರ್ಘ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಯಾದ 18 ದಿನಗಳ ಬಳಿಕ ನಟ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಪ್ರಸನ್ನ ಅವರು ಕಾಲಾವಕಾಶ ಕೇಳಿದ ಬೆನ್ನಲ್ಲೇ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 27ರಂದು ದರ್ಶನ್ ಪರ ವಕೀಲಕ ಮನವಿ ಮೇರೆಗೆ ಮತ್ತೆ ವಿಚಾರಣೆಯನ್ನು ಮುಂದೂಡಲಾಯಿತು.
ದಸರಾ ಹಬ್ಬದ ವೇಳೆಗೆ ಜಾಮೀನು?
ಕಳೆದ ವಾರ ಬಳ್ಳಾರಿ ಜೈಲಿನಲ್ಲಿ ವಕೀಲರು ದರ್ಶನ್‌ರನ್ನು ಭೇಟಿ ಮಾಡಿ ಹಲವು ಮಾತುಕತೆ ನಡೆಸಿದ್ದರು. ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಹಲವು ಅರ್ಜಿಗಳಿಗೆ ಸಹಿ ಹಾಕಿಸಿಕೊಳ್ಳುವ ಜೊತೆಗೆ, ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದರು ಎಂದು ವರದಿಯಾಗಿತ್ತು. ದರ್ಶನ್ ಭೇಟಿ ಬಳಿಕ ಮಾತನಾಡಿದ್ದ ವಕೀಲರು, ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನಲ್ಲೇ ಜಾಮೀನು ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ ಎಂದು ವಾದಿಸಲು ವಕೀಲರು ಸಜ್ಜಾಗಿದ್ದಾರೆ. ಸೋಮವಾರ ವಿಚಾರಣೆ ನಡೆಯಲಿದ್ದು, ಯಾವ ಅಂಶಗಳನ್ನೆಲ್ಲಾ ಪ್ರಸ್ತಾಪಿಸಿ ವಾದ ಮಾಡುತ್ತಾರೆ ಎನ್ನುವ ಕುತೂಹಲ ಇದೆ. ಎಲ್ಲವೂ ಅಂದುಕೊಂಡರೆ ಆದರೆ ದರ್ಶನ್‌ಗೆ ದಸರಾ ಹಬ್ಬದ ವೇಳೆಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ದರ್ಶನ್ ಆದಷ್ಟು ಬೇಗ ಹೊರಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದರ್ಶನ್‌ಗೆ ಜಾಮೀನು ಸಿಕ್ಕಿದರೆ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ಕೂಡ ಬುಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ದರ್ಶನ್‌ರ ಮುಂದಿನ ಸಿನಿಮಾ ಡೆವಿಲ್ ಸಿನಿಮಾದ ನಿರ್ದೇಶಕ ಪ್ರಕಾಶ್ ಕೂಡ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿದ್ದು, ಜಾಮೀನು ಸಿಗುವ ಸಾಧ್ಯತೆ ಇರುವುದರಿಂದ ಸಿನಿಮಾ ಚಿತ್ರೀಕರಣ ಮಾಡುವ ಬಗ್ಗೆ ಚರ್ಚೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications