ಎರಡು ಬಾರಿ ಸಿಎಂ ಆದ ಬಗ್ಗೆ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ನಾನು ವೀರಮಕ್ಕಳ ಕುಣಿತಕ್ಕೆ ಸೇರಿ ಶಿಕ್ಷಣದಿಂದ ವಂಚಿತನಾಗಿದ್ದೆ. ಆದರೆ ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ ಎಂದು ಸಿದ್ದರಾಮಯ್ಯ ನೆನೆದಿದ್ದಾರೆ.
ಮನುಷ್ಯತ್ವ ದ್ವೇಷಿಗಳು ಹಾಗೂ ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ. ನಮ್ಮ ಭಾರತ ಬಹುತ್ವದ ದೇಶ. ಸರ್ವಧರ್ಮ ಸಮನ್ವಯ ಭಾರತದ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಬಳ್ಳಾರಿಯ ಧರ್ಮಕ್ಷೇತ್ರದ ಅಮೃತ ಮಹೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ. ಧರ್ಮದ ಅರ್ಥ ಬಹಳ ಸರಳ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ ಎಂದಿದ್ದಾರೆ.
ನಮ್ಮ ಧರ್ಮವನ್ನು ಪಾಲಿಸೋಣ. ಎಲ್ಲ ಧರ್ಮಗಳನ್ನೂ ಗೌರವಿಸುವ ಸಹಿಷ್ಣುತೆ ಬೆಳೆಸಿಕೊಳ್ಳಿ ಎನ್ನುವುದೇ ನಮ್ಮ ಸಂವಿಧಾನದ ಮಹಾನ್ ಮೌಲ್ಯ. ಇದನ್ನು ಪಾಲಿಸುವುದೇ ನಾವು ಸ್ವಾಮಿ ವಿವೇಕಾನಂದರಿಗೆ, ಸಂವಿಧಾನಕ್ಕೆ ನೀಡುವ ಮಹೋನ್ನತ ಗೌರವ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ. ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಎಲ್ಲ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ನಮ್ಮ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿತು ಎಂದು ಶ್ಲಾಘಿಸಿದ್ದಾರೆ.
ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಸಂಸ್ಥೆಗಳು ಎಲ್ಲ ಧರ್ಮದ, ಎಲ್ಲ ಜಾತಿಯ ಬಡವರಿಗೂ ಶಿಕ್ಷಣ ಕೊಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ. ದೇವ ಒಂದೇ ನಾಮ ಹಲವು ಎನ್ನುವುದು ಎಲ್ಲರ ನಂಬಿಕೆ. ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶ ಎಂದು ಬಸವಾದಿ ಶರಣರು ಹೇಳಿದ್ದು ಈ ಕಾರಣಕ್ಕಾಗಿಯೇ ಎಂದು ಸ್ಮರಿಸಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಬಳ್ಳಾರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಸಂಡೂರು ಕ್ಷೇತ್ರದ ನೂತನ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅಲ್ಲದೆ ಇತ್ತೀಚೆಗೆ ಸಂಡೂರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ವೇಳೆ ಜನರ ಆಶೋತ್ತರಗಳ ಧ್ವನಿಯಾಗಿ ಕೆಲಸ ಮಾಡುವಂತೆ ಹಾಗೂ ರಾಜಕೀಯವಾಗಿ ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯಲು ಸಿದ್ದರಾಮಯ್ಯ ಶುಭ ಹಾರೈಸಿದರು.












Click it and Unblock the Notifications