ಈ ಬಾರಿ ಹಂಪಿ ಉತ್ಸವ ಸರಳವಾಗಿ ಆಚರಣೆ: ಎಚ್‌ಡಿ ಕುಮಾರಸ್ವಾಮಿ
ಬಳ್ಳಾರಿ, ಡಿಸೆಂಬರ್ 4: ಪ್ರತಿಪಕ್ಷ ಬಿಜೆಪಿ ಹಂಪಿ ಉತ್ಸವ ರದ್ದತಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಿಸಲು ಮುಂದಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಸ್ವಂತ ವೆಚ್ಚದಲ್ಲಿ ಹಂಪಿ ಉತ್ಸವ ಆಚರಿಸಲು ಮುಂದಾಗಿರುವ ಬೆನ್ನಲ್ಲೇ ಬಿಜೆಪಿಗೆ ಟಾಂಗ್ ಕೊಡಲು ಮುಂದಾದ ಎಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವೇ ಸರಳವಾಗಿ ಹಂಪಿ ಉತ್ಸವ ಆಚರಿಸಲಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ರಾಜ್ಯ ಸಂಸದರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಮಾಡುವುದಿಲ್ಲ ಎಂದು ನಾವೆಲ್ಲಿಯೂ ಹೇಳಿಲ್ಲ ಆದರೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಭೆ ಕರೆದು ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದರು.

ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲ ತೀವ್ರವಾಗಿರುವುದರಿಂದ ಈ ರೀತಿಯ ನಿರ್ಧಾರಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಸರಳವಾಗಿಯಾದರೂ ಈ ಬಾರಿ ಹಂಪಿ ಉತ್ಸವವನ್ನು ಆಚರಿಸಲಿದೆ. ಬಳ್ಳಾರಿ ಜಿಲ್ಲೆ ಹಾಗೂ ಆ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿ ಸರ್ಕಾರ ಹಂಪಿ ಉತ್ಸವ ಆಚರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೆ ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಬರಗಾಲ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಆಚರಿಸದೆ ಇರಲು ನಿರ್ಧರಿಸಿದೆ ಎಂದು ಪ್ರಕಟಿಸಿದ್ದರು.












Click it and Unblock the Notifications