ಜಾತಿ ಬಳಸಿ ಮತಯಾಚನೆ: ಸೋಮಣ್ಣ, ಮಾಧುಸ್ವಾಮಿ ವಿರುದ್ದ ದೂರು
ಬಳ್ಳಾರಿ, ಡಿಸೆಂಬರ್ 04: ಉಪ ಚುನಾವಣಾ ಪ್ರಚಾರದಲ್ಲಿ ಜಾತಿ ಬಳಸಿ ಮತಯಾಚಿಸಿರುವ ಸಚಿವರಾದ ವಿ.ಸೋಮಣ್ಣ ಮತ್ತು ಜೆ.ಸಿ.ಮಾಧುಸ್ವಾಮಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ದೂರು ಕೊಟ್ಟಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವರಾಜ ರಾಯರೆಡ್ಡಿ ಅವರು, "ವಿ.ಸೋಮಣ್ಣ ಹಾಗೂ ಜೆ.ಚಿ.ಮಾಧುಸ್ವಾಮಿ ಅವರು ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವೀರಶೈವ-ಲಿಂಗಾಯತ ಸಮಾವೇಶದಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಮತಯಾಚಿಸಿದ್ದಾರೆ, ಕೂಡಲೇ ಈ ಇಬ್ಬರು ಸಚಿವರನ್ನು ಬಂಧಿಸಿ, ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸಚಿವರು ಮತ್ತು ಸಭೆಯಲ್ಲಿ ಭಾಗವಹಿಸಿದ ಎಲ್ಲರ ವಿರುದ್ಧವೂ ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕೆಂದು ಹೇಳಿದರು. "ವೀರಶೈವ-ಲಿಂಗಾಯತರು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರಿಗೆ ಹಾಕುವ ಒಂದೊಂದು ಮತವೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಕಿದಂತೆ, ನೀವು ಮತ ಹಾಕದಿದ್ದರೆ ಯಡಿಯೂರಪ್ಪನವರಿಗೆ ಕಪಾಳಮೋಕ್ಷ ಮಾಡಿದಂತೆ" ಎಂದು ಹೇಳುವ ಮೂಲಕ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಿದ್ದಾರೆ ಎಂದು ಆರೋಪಿಸಿದರು.

ಯಾವುದೇ ರಾಜಕೀಯ ಪಕ್ಷಗಳು ಜಾತಿ,ಧರ್ಮದ ವಿಷಯದ ಮೇಲೆ ಮತಯಾಚಿಸುವುದು ಚುನಾವಣಾ ನೀತಿಯ ಉಲ್ಲಂಘನೆಯಾದಂತೆ, ಅಲ್ಲದೇ ಅದು ಸಮಾಜಕ್ಕೆ ಮಾಡಿದ ಅವಮಾನವಾಗಿದೆ, ಆದ್ದರಿಂದ ಕೂಡಲೇ ಈ ಇಬ್ಬರು ಸಚಿವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನೇಕ ಸಚಿವರು ಉಪ ಚುನಾವಣೆಯಲ್ಲಿ ಗೆಲ್ಲಲು ಹೊಸಪೇಟೆ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಾಗೂ ಚಿನ್ನದ ಆಮಿಷ ಒಡ್ಡುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಹೊಸಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 05 ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications