ಯಾವ ಗ್ಯಾರಂಟಿ, ಎಷ್ಟು ಮೊತ್ತವೆಂದು ಹೇಳಲು ಪರದಾಡಿದ ರಾಹುಲ್ ಗಾಂಧಿ; ವ್ಯಂಗ್ಯವಾಡಿದ ಬಿಜೆಪಿ ನಾಯಕರು

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಅಧಿಕಾರಕ್ಕೇರಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಸರತ್ತು ನಡೆಸಿವೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದ ಭರಾಟೆಯಲ್ಲಿ ರಾಜಕೀಯ ನಾಯಕರು ಮತದಾರರ ಓಲೈಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಕರುನಾಡ ಕುರುಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾನಾ ರಾಷ್ಟ್ರೀಯ ನಾಯಕರು ಮತಬೇಟೆಗೆ ಇಳಿದಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆದು ಮತ್ತೆ ಅಧಿಕಾರವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ಗ್ಯಾರಂಟಿ ಯೋಜನೆಗಳನ್ನು ಮತದಾರರ ಮುಂದಿಟ್ಟಿದೆ.

Karnataka Election: BJP Leaders Sarcastic On Rahul Gandhi To Struggled To Say How Much Worth Guarantee

ಶುಕ್ರವಾರದಂದು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜವಳಿ ಪಾರ್ಕ್​ಗಾಗಿ 5,000 ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಲು ಪರದಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಅವರನ್ನು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ಭರವಸೆ ನೀಡುವುದಕ್ಕೂ ಮೊದಲು, "ಎಷ್ಟು ಮೊತ್ತದ ಜವಳಿ ಪಾರ್ಕ್' ಎಂದು ರಣದೀಪ್ ಸುರ್ಜೇವಾಲ ಅವರನ್ನು ಕೇಳುತ್ತಿರುವ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ನಾಯಕರು, ಏನು ಗ್ಯಾರಂಟಿ, ಎಷ್ಟು ಮೊತ್ತದ ಗ್ಯಾರಂಟಿ ನೀಡುತ್ತಿದ್ದೇವೆ ಎಂಬುದೇ ತಿಳಿದಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ.

ಗ್ಯಾರಂಟಿ ಬಗ್ಗೆ ಘೋಷಣೆ ಮಾಡುವ ಮುನ್ನ ರಾಹುಲ್ ಗಾಂಧಿ ಅವರು ರಣದೀಪ್ ಸುರ್ಜೇವಾಲ ಅವರ ಜೊತೆ ಮೊತ್ತ 2000 ಕೋಟಿ ರೂಪಾಯಿಯೇ ಅಥವಾ 4000 ಕೋಟಿ ರೂಪಾಯಿಯೇ ಎಂದು ಕೇಳುತ್ತಿದ್ದಾರೆ. ಆಗ ಸುರ್ಜೇವಾಲ ಅವರು 5000 ಕೋಟಿ ರೂಪಾಯಿ ಎಂದು ಹೇಳಿಕೊಟ್ಟಿರುವುದು ವಿಡಿಯೋದಲ್ಲಿದೆ.

"ಇದು ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಜನರಿಗೆ ನೀಡುವ ವಾರಂಟಿ ಇಲ್ಲದ ಗ್ಯಾರಂಟಿಯ ಅವಸ್ಥೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ, ಛತ್ತೀಸ್​ಗಡ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳು ಈಡೇರಿಲ್ಲ. ಕರ್ನಾಟಕದ ಜನ ಈ ಗ್ಯಾರಂಟಿಗಳನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ," ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತನಗೇ ಗೊತ್ತಿಲ್ಲದ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡಲು ರಾಹುಲ್ ಗಾಂಧಿ ಮುಂದಾಗುತ್ತಿದ್ದಾರೆ," ಎಂದು ಬಿಜೆಪಿ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಐದು ಗ್ಯಾರಂಟಿಗಳನ್ನು ಈವರೆಗೆ ಘೋಷಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ಬಡ ಕುಟುಂಬದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ. ಹಣ ಮತ್ತು ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣದ ಭರವಸೆಗಳನ್ನು ನೀಡಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+