ಬಳ್ಳಾರಿಯಲ್ಲಿ ಪೌರಕಾರ್ಮಿಕರ ಮೇಲೆ ದೌರ್ಜನ್ಯ; ಆರು ಜನರ ವಿರುದ್ಧ FIR ದಾಖಲು
ಬಳ್ಳಾರಿ, ಅಕ್ಟೋಬರ್, 20: ಬಳ್ಳಾರಿಯ 17ನೇ ವಾರ್ಡ್‌ನ ಹನುಮಾನ್ ನಗರದಲ್ಲಿ ಒಳಚರಂಡಿ ಸ್ವಚ್ಛತೆಗೆ ತೆರಳಿದ್ದ ಪೌರಕಾರ್ಮಿಕರ ಮೇಲೆ ವಿರೂಪಾಕ್ಷಿ ಎಂಬುವರು ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿರೂಪಾಕ್ಷಿ ಅಲಿಯಾಸ್ ವಿರುಪಣ್ಣ ಮತ್ತು ಇತರ ಆರು ಜನರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಬ್ರೂಸ್‌ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ದುರುಗಮ್ಮ ತಮ್ಮ ಸಂಗಡಿಗರಾದ ಆನಂದ್, ಗಂಗಣ್ಣ, ನಾರಾಯಣಮ್ಮ, ಮಾರಕ್ಕ, ಮಂಗಮ್ಮನ ಜೊತೆ ವಿರೂಪಾಕ್ಷಿ ಮನೆ ಮುಂದೆ ಒಳಚರಂಡಿ ಸ್ವಚ್ಛಗೊಳಿಸಲು ಹೋಗಿದ್ದರು. ಚರಂಡಿಗೆ ಅಡ್ಡಲಾಗಿ ಇಟ್ಟಿದ್ದ ಕಲ್ಲುಗಳನ್ನು ತೆಗೆಯಲು ಹೋದಾಗ ಜಗಳ ನಡೆದಿದೆ. ವಿರೂಪಾಕ್ಷಿ ಮತ್ತಿತರರು ಅವಾಚ್ಯ ಶಬ್ಧಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬ್ರೂಸ್‌ಪೇಟೆ ಪೊಲೀಸರಿಗೆ ದುರುಗಮ್ಮ ದೂರು ನೀಡಿದ್ದರು.
ಬಳ್ಳಾರಿ: ಭಾರತ್ ಜೋಡೊ ಸಮಾವೇಶದ ಕಸ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು
ಪೌರಕಾರ್ಮಿಕರ ಮೇಲೆ ಹಲ್ಲೆ
ಮಳೆ ನೀರು ರಸ್ತೆಯ ಮೇಲೆ ಸಂಗ್ರಹವಾಗಿದ್ದ ನೀರನ್ನು ಹೊರಹಾಕಲು ಪೌರಕಾರ್ಮಿಕರು ಮುಂದಾಗಿದ್ದರು. ಹೊರ ಚರಂಡಿ ಕಲ್ಲುಗಳನ್ನು ತೆಗೆಯಲು ಮುಂದಾದಾಗ ಅಲ್ಲಿನ ನಿವಾಸಿ ವಿರುಪಣ್ಣ ಹಾಗೂ ಅವರ ಕುಟುಂಬದ ಆರು ಜನ ಸದಸ್ಯರು ಪಾಲಿಕೆಯ ಪೌರಕಾರ್ಮಿಕರನ್ನು ಜಾತಿ ಬಳಸಿ ನಿಂದಿಸಿದ್ದಾರೆ. ಅಲ್ಲದೆ ಹಲ್ಲೆಯನ್ನು ಮಾಡಿದ್ದಾರೆ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಬ್ರೂಸ್‍ಪೇಟೆ ಠಾಣೆಯಲ್ಲಿ ಹಲ್ಲೆಗೀಡಾದ ಪೌರಕಾರ್ಮಿಕರು ಹಲವು ಸೆಕ್ಷನ್‍ಗಳಡಿ ದೂರು ದಾಖಲಿಸಿದ್ದಾರೆ. ಬಳ್ಳಾರಿ ನಗರದಾದ್ಯಂತ ಭಾರಿ ಮಳೆ ಸುರಿದಿದ್ದು, ಸಾಕಷ್ಟು ಕಡೆಗಳಲ್ಲಿ ನೀರು ಮೋರಿಗೆ ಸರಾಗವಾಗಿ ತೆರಳದೇ ರಸ್ತೆಗಳಲ್ಲೇ ಸಂಗ್ರಹವಾಗಿತ್ತು.
ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು
ಅದೇ ರೀತಿ ಹನುಮಾನ್ ನಗರದ ರಸ್ತೆಯು ಕೂಡ ಜಲಾವೃತವಾಗಿತ್ತು. ವಿರುಪಾಕ್ಷಿ ಎಂಬುವವರ ಮನೆಯ ಮುಂದಿನ ಮೋರಿಯಲ್ಲಿ ಜಾಲರಿ ಅಳವಡಿಸಿದ್ದರು. ಅಲ್ಲದೇ ಅಲ್ಲಿ ಕಲ್ಲನ್ನು ಅಡ್ಡಲಾಗಿ ಇಡಲಾಗಿತ್ತು. ಕಲ್ಲುಗಳನ್ನು ತೆರವುಗೊಳಿಸಿ ರಸ್ತೆ ಮೇಲಿರುವ ನೀರನ್ನು ಮೋರಿಗೆ ಸರಾಗವಾಗಿ ಹೋಗುವಂತೆ ಮಾಡಲು ಪೌರಕಾರ್ಮಿಕರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮೋರಿಯ ಮೇಲೆ ಹಾಕಲಾಗಿರುವ ಕಲ್ಲುಗಳನ್ನು ತೆಗೆಯದಂತೆ ವಿರುಪಾಕ್ಷಿ ಮತ್ತು ಆತನ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪೌರಕಾರ್ಮಿಕರ ವಿರುದ್ಧ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದು, ಈ ಹಿನ್ನೆಲೆ ವಿರೂಪಾಕ್ಷಿ ಮತ್ತು ಇತರ ಆರು ಜನರ ವಿರುದ್ಧ 307, 354, 353 ಹಾಗೂ ಜಾತಿ ನಿಂದನೆ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಬಳ್ಳಾರಿ ನಗರದ ಡಿವೈಎಸ್‍ಪಿ ಅವರು ಪಂಚನಾಮೆಯನ್ನು ಕೂಡ ಮಾಡಿದ್ದಾರೆ. ಜಗಳದಲ್ಲಿ ಗಂಗಣ್ಣ, ಶ್ರೀನಿವಾಸ್ ಎಂಬುವವರಿಗೆ ವಿರುಪಾಕ್ಷಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಹಲ್ಲೆ, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಮುಂತಾದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.