ಕೋವಿಡ್ ಆಯುರ್ವೇದಿಕ್ ಔಷಧಿ ವಿತರಣೆ; ಒಪ್ಪಿಗೆ ನೀಡುವಂತೆ ಪತ್ರ
ವಿಜಯನಗರ, ಜೂನ್ 30; ಕೋವಿಡ್ ವಿರುದ್ಧದ ಆಯುರ್ವೇದಿಕ್ ಔಷಧಿಯನ್ನು ವಿತರಣೆ ಮಾಡದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಔಷಧಿ ವಿತರಣೆ ಮಾಡಲು ಒಪ್ಪಿಗೆ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆಯ ಕಮಲಾಪುರದಲ್ಲಿ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಜೂನ್ 27ರಂದು ಉಚಿತವಾಗಿ ಸಾರ್ವಜನಿಕರಿಗೆ ಔಷಧಿ ವಿತರಣೆ ಮಾಡಿದ್ದರು.
ಆಂಧ್ರಪ್ರದೇಶದ ಆನಂದಯ್ಯ ಕಂಡುಹಿಡಿದಿರುವ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿತ್ತು. ಆದರೆ ಔಷಧಿ ವಿತರಣೆಗೆ ಸರ್ಕಾರ ನಿರ್ಬಂಧ ಹೇರಿರುವುದರಿಂದ ವಿತರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಈಗಾಗಲೇ ಔಷಧಿಯನ್ನು ವಿಜಯನಗರದ ಪಂಪಾಕ್ಷೇತ್ರದ ಕಮಲಾಪುರ, ಹಂಪಿ, ಕೊಪ್ಪಳದ ಆನೆಗುಂದಿ, ಗಂಗಾವತಿ, ಬಳ್ಳಾರಿ ಭಾಗದಲ್ಲಿ ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಜಯನಗರ ಸುತ್ತಮುತ್ತಲೂ ಈ ಔಷಧಿ ಹಂಚಿಕೆಯಾಗಿದೆ.
ಕರ್ನಾಟಕದಲ್ಲಿ ಔಷಧಿಯನ್ನು ವಿತರಿಸಲು ನಿರ್ಬಂಧ ವಿಧಿಸಿರುವ ಹಿನ್ನಲೆ ಸರ್ಕಾರ ಪರವಾನಗಿ ನೀಡುವವರೆಗೂ ಯಾವುದೇ ಕಾರಣಕ್ಕೂ ಔಷಧಿ ವಿತರಣೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಆದ್ದರಿಂದ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಔಷಧಿ ಹಂಚಿಕೆಗೆ ತಾತ್ಕಲಿಕ ತಡೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಔಷಧಿ ವಿತರಣೆಗೆ ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಈಗಾಗಲೇ 2500 ಕುಟುಂಬಗಳ 15 ಸಾವಿರ ಜನರಿಗೆ ಔಷಧ ಹಂಚಿಕೆ ಮಾಡಲಾಗಿದೆ. ಔಷಧ ಸ್ವೀಕಾರ ಮಾಡಿದವರ ಆಧಾರ್ ಕಾರ್ಡ್ ಸೇರಿ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಔಷಧಿಯಲ್ಲಿ ಯಾವುದೇ ಅಪಾಯಕಾರಿ ಪದಾರ್ಥಗಳು ಇಲ್ಲವೆಂದು ದೃಢೀಕರಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications