ವಿಶ್ವ ವಿಖ್ಯಾತ ಹಂಪಿಯಲ್ಲಿ 144 (3) ಸೆಕ್ಷನ್ ಜಾರಿ
ಬಳ್ಳಾರಿ, ಮಾರ್ಚ್ 14: ಕೊರೋನಾ ಭೀತಿ ಹಿನ್ನೆಲೆ ಮಾ.15 ರಿಂದ ಹಂಪಿಯಲ್ಲಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, "ಸರ್ಕಾರ ಕೊರೊನಾ ಕುರಿತು ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಸ್ಥಳೀಯರು ಹೋಗಲು ಅವಕಾಶವಿದೆ. ಪೂಜೆ, ಪುನಸ್ಕಾರಗಳಿಗೆ ನಿರ್ಬಂಧ ಹೇರಿಲ್ಲ" ಎಂದು ಮಾಹಿತಿ ನೀಡಿದ್ದಾರೆ.
"ಇದರ ಹೊರತಾಗಿ ಹಂಪಿಯ ಉಳಿದ ಸ್ಮಾರಕ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿಸರ್ಕಾರಿ ಸೇರಿದಂತೆ ಎಲ್ಲಾ ಖಾಸಗಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಫ್ರಾನ್ಸ್ ಮತ್ತು ಜರ್ಮನಿ ದೇಶದಿಂದ ಜಿಲ್ಲೆಗೆ ಆಗಮಿಸಿದ 10 ಜನರ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಹೀಗಾಗಿ ಜನ ಭಯ ಪಡದೇ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಿ" ಎಂದು ಮನವಿ ಮಾಡಿದ್ದಾರೆ.

ಈ ನಡುವೆ ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ ಹತ್ತು ಜನರಲ್ಲಿ ಕೊರೊನಾ ಶಂಕೆ ವ್ಯಕ್ತಗೊಂಡಿದ್ದು, ಅದರಲ್ಲಿ ಮೂರು ಜನರ ರಕ್ತ ಪರೀಕ್ಷೆ ವರದಿ ಬಂದಿದೆ. ಮೂವರ ರಕ್ತದ ಮಾದರಿಯೂ ನೆಗಟಿವ್ ಬಂದಿದೆ. ಇನ್ನುಳಿದವರ ರಕ್ತದ ಮಾದರಿ ಸ್ಯಾಂಪಲ್ ಫಲಿತಾಂಶ ಇನ್ನೂ ಬಂದಿಲ್ಲ. ಸ್ಯಾಂಪಲ್ ಸಂಗ್ರಹಿಸಿದ ವ್ಯಕ್ತಿಗಳು 14 ದಿನಗಳ ಕಾಲ ಸಾರ್ವಜನಿಕರ ಜತೆ ಬೇರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.












Click it and Unblock the Notifications