ರಾಷ್ಟ್ರಧ್ವಜ ನೇಯುವುದೇ ದೊಡ್ಡ ಗೌರವ, ಆದರೆ ಸಂಬಳ ಕೇಳಂಗಿಲ್ಲ!
ಬಾಗಲಕೋಟೆ, ಆಗಸ್ಟ್ 9: ಇಡೀ ದೇಶವೇ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಹರ್ ಘರ್ ಮೇ ತಿರಂಗಾ ಮೂಲಕ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡುತ್ತಿದೆ. ಎಲ್ಲರ ಮುಖದಲ್ಲೂ ಸ್ವಾತಂತ್ರ್ಯದ ಖುಷಿಯಿದೆ. ಆದರೆ ಪ್ರತಿ ವರ್ಷ ಆ ಖುಷಿಗೆ ಕಾರಣವಾಗುತ್ತಿದ್ದವರೇ ಇದೀಗ ಆತಂಕದಲ್ಲಿದ್ದಾರೆ. ಸರಕಾರ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿರುವ ಆದೇಶದಿಂದಾಗಿ ಕೇವಲ ಆ ಒಂದೇ ಉದ್ಯೋಗ ನಂಬಿ ಜೀವಿಸುತ್ತಿದ್ದ ಕಾರ್ಮಿಕರು ಜೀವನ ಅತಂತ್ರವಾಗಿದೆ. ದಿಕ್ಕು ತೋಚದ ಅವರೆಲ್ಲಾ ಬೀದಿಗೆ ಬಿಳ್ಳುವ ಪರಿಸ್ಥಿತಿ ಎದುರಾಗಿದೆ.
ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದದಲ್ಲಿ ಭಾರತದ ರಾಷ್ಟ್ರಧ್ವಜ ಬಟ್ಟೆಯನ್ನು ಕಳೆದ 20ವರ್ಷಗಳಿಂದ ನೇಯ್ದುಕೊಂಡು ಬರಲಾಗುತ್ತಿದೆ. ಸುಮಾರು ನೂರಕ್ಕೂ ಅಧಿಕ ಕಾರ್ಮಿಕರು ಪ್ರತಿದಿನ ರಾಷ್ಟ್ರಧ್ವಜ ಬಟ್ಟೆ ನೇಯುವ ಕಾಯಕದಲ್ಲಿ ನಿರತಂತರವಾಗಿ ದುಡಿಯುತ್ತಿದ್ದಾರೆ. ಆದರೆ ಹೀಗೆ ರಾಷ್ಟ್ರಧ್ವಜದ ಬಟ್ಟೆ ನೇಯುವ ಈ ಕಾರ್ಮಿಕರಿಗೆ ಕೇವಲ ಗೌರವ ಸಿಗುತ್ತಿದಿಯೇ ಹೊರತು, ಕೆಲಸಕ್ಕೆ ತಕ್ಕನಾದ ಸಂಬಳ ಮಾತ್ರ ಇವರಿಗೆ ಸಿಗುತ್ತಿಲ್ಲ.
ವ್ಯಾಪಾರವಾದ ದೇಶಪ್ರೇಮ; ರಾಷ್ಟ್ರಧ್ವಜದಲ್ಲಿ ಧ್ವಜ ನಿಯಮವೇ ನಾಪತ್ತೆ!
ಇನ್ನು ಈ ಬಾರಿ ಕೇಂದ್ರ ಸರ್ಕಾರ ಪಾಲಿಸ್ಟರ್ ಧ್ವಜಕ್ಕೆ ನೀಡಿರುವ ಆದೇಶ ತಪ್ಪು. ಯಾಕೆಂದರೆ ನಿಯಮ ಬದ್ಧವಾಗಿ ರಾಷ್ಟ್ರಧ್ವಜ ನಿರ್ಮಾಣ ಮಾಡಬೇಕು. ನಿಯಮಾವಳಿ ಪ್ರಕಾರ ಭಾವುಟ ತಯಾರಿಸಬೇಕು. ಖಾದಿ ಬಟ್ಟೆಯ ಮಣ್ಣಲ್ಲಿ ಮಣ್ಣಾಗುತ್ತದೆ. ಪಾಲಿಸ್ಟರ್ ಕೊಳೆಯುವುದಿಲ್ಲ. ರಾಷ್ಟ್ರಧ್ವಜ ಅಳತೆ ತಪ್ಪಬಾರದು. ಹೀಗಾಗಿ ಪಾಲಿಸ್ಟರ್ ಗೆ ಅವಕಾಶ ನೀಡಿದ್ದು ತಪ್ಪು, ಇದರಿಂದ ನಮಗೂ ಕೂಡಾ ದೊಡ್ಡ ಹೊಡೆತ ಬಿದ್ದಿದೆ ಎಂದು ಕಾರ್ಮಿಕರು ಅಳಲನ್ನು ತೋಡಿಕೊಂಡಿದ್ದಾರೆ.
ದಿನಕ್ಕೆ 100-150 ರೂ ಸಂಬಳ
ಬೆಳಗ್ಗೆಯಿಂದ ಸಾಯಂಕಲಾದ ವರೆಗೂ ಬಟ್ಟೆ ನೇಯ್ದರೂ ಇಲ್ಲಿನ ಕಾರ್ಮಿಕರಿಗೆ ನೂರು ರೂಪಾಯಿ ಸಂಬಳ ಮಾತ್ರ ಸಿಗುತ್ತಿದೆ. ಈ ಸಂಬಳದಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಹೇಗೆ? ಸಂಸಾರ ದೂಗಿಸುವುದು ಹೇಗೆ? ರಾಷ್ಟ್ರಧ್ವಜ ಬಟ್ಟೆ ನೇಯುವ ಗೌರವ ಒಂದನ್ನ ಬಿಟ್ರೆ, ಬೇರೆನೂ ಸೌಲಭ್ಯ ನಮಗೆ ಸಿಗುತ್ತಿಲ್ಲ. ಸರ್ಕಾರ ನಮಗೆ ಸೂಕ್ತ ಸಂಬಳ ನೀಡಬೇಕು. ಪಿಂಚಣಿ ಸಹ ದೊರಕಿಸಿ ಕೊಡಬೇಕು ಎಂದೂ ಆಗ್ರಹಿಸಿದ್ದಾರೆ.

ತುಳಸಿಗೇರಿ ಖಾದಿ ಕೇಂದ್ರ
ತುಳಸಿಗೇರಿ ಖಾದಿ ಕೇಂದ್ರವನ್ನು 1980 ರಲ್ಲಿ ಪ್ರಾರಂಭಿಸಲಾಗಿದೆ. ಕೇಂದ್ರದಲ್ಲಿ ಒಟ್ಟು ಈಗ 45 ಜನ ಕಾರ್ಮಿಕರು ನಿತ್ಯ ರಾಷ್ಟ್ರಧ್ವಜ ಬಟ್ಟೆ ನೇಯುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಒಬ್ಬ ಕಾರ್ಮಿಕರು ದಿನಕ್ಕೆ 5 ರಿಂದ 6 ಮೀಟರ್ ಬಟ್ಟೆ ನೇಯುತ್ತಾರೆ. ಕಾರ್ಮಿಕರಿಗೆ ಒಂದು ಮೀಟರ್ ಬಟ್ಟೆಗೆ 31 ರುಪಾಯಿ ಕೊಡುತ್ತಾರೆ. ಇದರಿಂದ ದಿನವೊಂದಕ್ಕೆ ಕಾರ್ಮಿಕರಿಗೆ 100-150 ರೂಪಾಯಿ ಸಿಗುವುದೇ ದೊಡ್ಡ ಮೊತ್ತ. ಇದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಒಂದು ಮೀಟರ್‌ಗೆ 40-45 ರೂಪಾಯಿ ನೀಡಬೇಕು ಎಂದು ಕಾರ್ಮಿಕರ ಬೇಡಿಕೆಯಾಗಿದೆ.
ಇದರ ಜೊತೆಗೆ ದಾರದ ಒಂದು ಲಡಿಗೆ 9 ರೂಪಾಯಿ ನೀಡಲಾಗುತ್ತಿದೆ. ಇದಕ್ಕೆ 12 ರೂಪಾಯಿ ನೀಡಬೇಕು ಎನ್ನುವ ಬೇಡಿಕೆ ಇದೆ. ಆದರೆ 2-3 ವರ್ಷಗಳಿಂದ ಇದೇ ಬೇಡಿಕೆ ಇಡುತ್ತಲೇ ಬಂದಿದ್ದರೂ ಕಾರ್ಮಿಕರ ಬೇಡಿಕೆಗಳು ಮಾತ್ರ ಈಡೇರುತ್ತಿಲ್ಲ.
ಒಟ್ಟಾರೆ ರಾಷ್ಟ್ರಧ್ವಜ ಬಟ್ಟೆ ತಯಾರಿಕೆ ಗೌರವ ಒಂದು ಕಡೆಯಾದ್ರೆ, ಕಾರ್ಮಿಕರ ಜೀವನ ಕೇವಲ ಗೌರವದಿಂದ ಮಾತ್ರ ನಡೆಯಲ್ಲ, ಅದಕ್ಕೆ ತಕ್ಕ ಸಂಬಳವೂ ನೀಡಬೇಕು ಎನ್ನುವುದನ್ನು ಸರಕಾರ ಅರಿತುಕೊಳ್ಳುವ ಅಗತ್ಯವಿದೆ.