ತೇರದಾಳದಲ್ಲಿ ಯೋಗ ಮಾಡುವ ವೇಳೆ ಮೃತಪಟ್ಟ ಶಾಲಾ ಶಿಕ್ಷಕ
ಬಾಗಲಕೋಟೆ, ಜೂನ್.21: ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಮಾಡುತ್ತಿರುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು ಗುರುವಾರ ನಡೆದಿದೆ.
ಜಿಲ್ಲೆಯ ತೇರದಾಳ ಪಟ್ಟಣದ ಜೆವಿ ಮಂಡಳಿ ಸಂಸ್ಥೆಯ ವತಿಯಿಂದ ಗುರುಕುಲ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಮಾಡುವ ವೇಳೆ ಶಿಕ್ಷಕರು ಸಾವನ್ನಪ್ಪಿದ್ದಾರೆ.
ಮೃತರು ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದ ಎಸ್ ಜೆ ಬಾಲಕಿಯರ ಪ್ರೌಢ ಶಾಲೆಯ ಗಣಿತ ಶಿಕ್ಷಕ ವಿಶ್ವನಾಥ ಆರ್. ಬಿರಾದಾರ (47) ಎನ್ನಲಾಗಿದ್ದು, ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ಖಚಿತವಾಗಿದೆ.

ಇಂದು ವಿಶ್ವದೆಲ್ಲೆಡೆ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ವೇಳೆ ಇಂತಹ ಅವಘಡ ಸಂಭವಿಸಿರುವುದು ಕುಟುಂಬಸ್ಥರಿಗೆ, ವಿದ್ಯಾರ್ಥಿಗಳಿಗೆ, ಆಪ್ತರಿಗೆ ಬಹಳ ದುಃಖವನ್ನುಂಟು ಮಾಡಿದೆ.
ಶಿಕ್ಷಕರ ನಿಧನಕ್ಕೆ ಶಾಲಾ ಸಿಬ್ಬಂದಿಗಳು, ಆಡಳಿತ ಮಂಡಳಿಯವರು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.












Click it and Unblock the Notifications