ಪ್ರಧಾನಿ ಮೋದಿ ಜೈಲಿಗೆ ಹೋಗುತ್ತಾರೆ: ಭವಿಷ್ಯ ನುಡಿದ ಸಿದ್ದರಾಮಯ್ಯ
Recommended Video

ಜಮಖಂಡಿ, ನವೆಂಬರ್ 2: ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ನ.3 ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಪರ ಪ್ರಚಾರ ನಡೆಸುತ್ತಿದ್ದ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು.
ರಫೇಲ್ ಡೀಲ್ ನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳು ಹೊರಬೀಳಲಿವೆ. ಆಗ ಮೋದಿಯವರು ಜೈಲಿಗೆ ಹೋಗುವುದು ಖಂಡಿತ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋದಂತೆ, ಮೋದಿಯವರೂ ಹೋಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

'ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಸಮಯದಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ ಜನರ ಮತ ಪಡೆಯಲು ಸಾಧ್ಯವಿಲ್ಲದ ಕಾರಣ, ಬಿಜೆಪಿ ರಾಮ ಮಂದಿರದ ವಿಷಯವನ್ನು ಮತ್ತೆ ಕೆದಕುತ್ತಿದೆ' ಎಂದು ಅವರು ಹರಿಹಾಯ್ದರು.
'ಕೋಮು ರಾಜಕೀಯದ ಮೂಲಕ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿರುವ ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರವಿಡಿ' ಎಂದು ಅವರು ಕರೆ ನೀಡಿದರು.
ಜಮಖಂಡಿ ಶಾಸಕರಾಗಿದ್ದ ಕಾಂಗ್ರೆಸ್ಸಿನ ಸಿದ್ದುನ್ಯಾಮಗೌಡ ಅವರ ಅಕಾಲಿಕ ಮರಣದ ನಂತರ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅವರ ಪುತ್ರ ಆನಂದ ನ್ಯಾಮಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.












Click it and Unblock the Notifications