ನಾನು ರಾಜಕೀಯಕ್ಕೆ ಬರಲು ಒಂದು ವರ್ಷ ಸಾಕು: ಜನಾರ್ದನ ರೆಡ್ಡಿ
ಬಾಗಲಕೋಟೆ, ಜನವರಿ 19: ಮುಂದೆ ರಾಜಕೀಯಕ್ಕೆ ಮತ್ತೆ ಬಂದೇ ಬರುತ್ತೇನೆ. ರಾಜಕೀಯಕ್ಕೆ ಬರಲು ನನಗೆ ಒಂದು ವರ್ಷವಷ್ಟೇ ಸಾಕು. ಆ ಕಾಲ ನನಗೆ ಬಂದೇ ಬರುತ್ತದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಇಡೀ ದೇಶವೇ ತಿರುಗಿ ನೋಡುವಂತೆ ಕರ್ನಾಟಕದ ಒಬ್ಬ ಒಳ್ಳೆಯ ರಾಜಕಾರಣಿಯಾಗಿ ಬೆಳೆಯುತ್ತೇನೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಮಾಜವನ್ನು ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕ ಯಡಿಯೂರಪ್ಪ ಅವರೊಂದಿಗೆ ಇದ್ದೆ. ಅವರ ಜೊತೆಗೂಡಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ್ದೆ. ಮುಂದಿನ ದಿನಗಳಲ್ಲಿ ಮತ್ತೆ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.

ಬೆನಕಟ್ಟಿಯ ವೇಮನ ಜಯಂತಿ ಮತ್ತು ಜಾತ್ರೆ ಪ್ರಯುಕ್ತ ಜನಾರ್ದನ ರೆಡ್ಡಿ 9 ಕಿ.ಮೀ. ಪಾದಯಾತ್ರೆ ಮಾಡಿದರು. ಸಂಕಷ್ಟದ ದಿನಗಳಿಂದ ಮುಕ್ತನಾದ ಬಳಿಕ ಮೂರು ವರ್ಷಗಳಿಂದ ಬೆನಕಟ್ಟಿಗೆ ಬರಲು ಸಾಧ್ಯವಾಗಿರಲಿಲ್ಲ. ವೇಮನರಿಗೆ ಮತ್ತು ಬೆನಕಟ್ಟಿ ಗ್ರಾಮಸ್ಥರಿಗೆ ಗೌರವ ಸಲ್ಲಿಸಲು ಪಾದಯಾತ್ರೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಜಕೀಯ ಉದ್ದೇಶಕ್ಕೆ ಪಾದಯಾತ್ರೆ ಮಾಡಿಲ್ಲ. ಸಮಾಜವನ್ನು ಬಳಸಿಕೊಂಡು ರಾಜಕೀಯ ಮಾಡುವುದೂ ಇಲ್ಲ. 2008ರಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಮಾಡುವಾಗಲೂ ಒಬ್ಬ ರೆಡ್ಡಿಯಾಗಿ ಕೆಲಸ ಮಾಡಿದ್ದೇನೆ.
ನನ್ನ ಜೀವನವನ್ನು ಎರಡು ಭಾಗಗಳಲ್ಲಿ ನೋಡುತ್ತೇನೆ. ಮಂತ್ರಿ, ಅಧಿಕಾರ ಮತ್ತು ಹೆಲಿಕಾಪ್ಟರ್ ಮೊದಲ ಹಂತದ ಬದುಕು. ರೆಡ್ಡಿ ಸಮಾಜದ ಜನರೊಂದಿಗೆ ಎರಡನೆಯ ಹಂತದ ಬದುಕು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.












Click it and Unblock the Notifications