'ನನ್ನ ಅಕ್ಕ ಇದ್ದಂತೆ': ವೀಣಾ ಕಾಶಪ್ಪನವರ್ ಪರ ಸಂಯುಕ್ತಾ ಪಾಟೀಲ್ ಬ್ಯಾಟಿಂಗ್
ಬಾಗಲಕೋಟೆ, ಮಾರ್ಚ್ 22: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ 17 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಈ ಪೈಕಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಚಿವ ಶಿವಾನಂದ ಪಾಟೇಲ್ ಪುತ್ರಿ ಸಂಯುಕ್ತಾ ಪಾಟೀಲ್ ಪಾಲಾಗಿದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅನೇಕ ಆಕಾಂಕ್ಷಿಗಳಿದ್ದರು. ಈ ಪೈಕಿ ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರೂ ಕೂಡ ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ವೀಣಾ ಕಾಶಪ್ಪನವರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿದ್ದು, ಸಂಯುಕ್ತಾ ಪಾಟೀಲ್ ಅವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಿದೆ.

ಟಕೆಟ್ ಕೈ ತಪ್ಪಿರುವ ಬಗ್ಗೆ ವೀಣಾ ಕಾಶಪ್ಪನವರ್ ತೀವ್ರ ಅಸಮಧಾನಗೊಂಡಿದ್ದು, ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದರು. ಈ ಬಗ್ಗೆ ಇದೀಗ ಟಿಕೆಟ್ ಪಡೆದಿರುವ ಸಂಯುಕ್ತಾ ಪಾಟೀಲ್ ಮಾತನಾಡಿದ್ದು, ವೀಣಾ ಕಾಶಪ್ಪನವರ್ ನನ್ನ ಅಕ್ಕ ಇದ್ದಂತೆ, ಅವರ ಸಹಯೋಗದಲ್ಲೇ ಈ ಬಾರಿಯ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಟಿಕೆಟ್ ಘೋಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಸಿಕ್ಕಿರುವುದು ಖುಷಿಯಾಗಿದೆ. ಪಕ್ಷ ನನಗೊಂದು ಅವಕಾಶ ನೀಡಿದೆ. ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ರಾಜಕೀಯಕ್ಕೆ ಬಂದಿರುವುದು ಖುಷಿಯಿದೆ. ಜೊತೆಗೆ ನನ್ನ ಹೆಗಲ ಮೇಲೆ ಪಕ್ಷ ಕೊಟ್ಟಿರುವ ದೊಡ್ಡ ಜವಾಬ್ದಾರಿ ಕೂಡ ಇದೆ. ಅದನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ ಎನ್ನುವ ನಂಬಿಕೆ ಕೂಡ ನನಗೆ ಇದೆ ಎಂದರು.
ವೀಣಾ ಕಾಶಪ್ಪನವರ್ ಅಸಮಧಾನ ಬಗ್ಗೆ ಮಾತನಾಡಿದ ಸಂಯುಕ್ತಾ ಪಾಟೀಲ್, ಅವರು ನನಗೆ ಅಕ್ಕ ಇದ್ದಂತೆ. ನನಗೆ ನಂಬಿಕೆ ಇದೆ, ಪಕ್ಷದ ವರಿಷ್ಠರ ಸೂಚನೆ ಮೇರೆಗೆ, ಕ್ಷೇತ್ರದ ಎಲ್ಲಾ ಶಾಸಕರು, ಎಂಎಲ್‌ಸಿಗಳು, ಹಾಗೂ ಅಕ್ಕ ಸೇರಿದಂತೆ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎನ್ನುವ ನಂಬಿಕೆ ನನಗಿದೆ ಎಂದರು ಹೇಳಿದರು.
ಸಾಮಾಜಿಕ ಜಾಲತಾಣಲ್ಲಿ ವೀಣಾ ಕಾಶಪ್ಪನವರ್ ಪರ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಸ್ಪರ್ಧೆ ಇದ್ದಲ್ಲಿ ಈ ರೀತಿ ಅಭಿಯಾನಗಳು ನಡೆಯುವುದು ಸಹಜ. ಅವರೆಲ್ಲರನ್ನೂ ಹೇಗೆ ಒಗ್ಗೂಡಿಸಿ ಹೋಗುತ್ತೇವೆ ಎನ್ನುವುದು ನಮ್ಮ ಮುಂದಿರುವ ಸವಾಲು. ಆ ಸವಾಲನ್ನು ಎದುರಿಸಲು ನಾನು ಸಮರ್ಥಳಾಗಿದ್ದೇನೆ. ಯಾರೇ ಏನೇ ಅಭಿಯಾನ ಮಾಡಿದರೂ ಕೂಡ ಅವರು ನಮ್ಮ ಪಕ್ಷದ ಕಾರ್ಯಕರ್ತರೇ. ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿ ಕೂಡ ಇದೆ. ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯಕರ್ತನನ್ನು ಮಾತನಾಡಿಸುತ್ತೇನೆ. ವಿಶೇಷವಾಗಿ ವೀಣಾ ಕಾಶಪ್ಪನವರ್ ಅವರನ್ನು ಮಾತನಾಡಿಸಿ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.












Click it and Unblock the Notifications