Samyukta Patil: ಹೊರಗಷ್ಟೇ ಅಲ್ಲ ಮನೆಯೊಳಗೂ ಬಂಡಾಯ ಎದುರಿಸಬೇಕಿದೆ ಸಂಯುಕ್ತಾ ಪಾಟೀಲ್!
ಬಾಗಲಕೋಟೆ, ಏಪ್ರಿಲ್.06: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಯಾದಾಗಿನಿಂದ ಪಕ್ಷಗಳಲ್ಲಿ ಬಂಡಾಯದ ಬಿಸಿ ಕಾಣಿಸುತ್ತಲೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಪರೋಕ್ಷ ಮತ್ತು ಪ್ರತ್ಯಕ್ಷವಾಗಿಯೇ ಹಲವು ನಾಯಕರು ಬಂಡಾಯವೆದ್ದಿದ್ದಾರೆ.
ಇದೇ ರೀತಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌ಗೆ ಬಂಡಾಯದ ಬಿಸಿ ತಾಗುತ್ತಲೇ ಇದೆ. ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅಭ್ಯರ್ಥಿಯನ್ನು ಬದಲಿಸಬೇಕು ಎನ್ನುವ ಪಟ್ಟಿನಿಂದ ಹಿಂದೆ ಬಂದಿಲ್ಲ. ಕಾಶಪ್ಪನವರ್ ಬಣದ ಬಂಡಾಯದ ಭೀತಿಯ ನಡುವೆಯೇ ತನ್ನದೆ ಕುಟುಂಬದಿಂದ ಮತ್ತೊಂದು ಬಂಡಾಯವನ್ನು ಎದುರಿಸಬೇಕಿದೆ ಸಂಯುಕ್ತಾ ಪಾಟೀಲ್.

ಹೌದು.. ಸಚಿವ ಶಿವಾನಂದ ಪಾಟೀಲ್ ಮಗಳಾದ ಸಂಯುಕ್ತಾ ಪಾಟೀಲ್ ಅವರನ್ನು ಈ ಬಾರಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರನ್ನು ಸೋಲಿಸಲು ಬಿಜೆಪಿ ದೊಡ್ಡ ರಣತಂತ್ರ ಹೆಣೆದಿದ್ದು, ಅವರ ಅಣ್ಣ ಹರ್ಷಗೌಡ ಪಾಟೀಲ್‌ಗೆ ಬಲೆ ಬೀಸಿದ್ದಾರೆ. ತಂಗಿಯ ವಿರುದ್ಧ ಅಣ್ಣನಿಂದ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ.
ಬಿಜೆಪಿ ಸೇರಿದ ಹರ್ಷಗೌಡ ಪಾಟೀಲ್
ಸಚಿವ ಶಿವಾನಂದ್ ಪಾಟೀಲ್ ಸಹೋದರರ ಪುತ್ರ ಹರ್ಷಗೌಡ ಪಾಟೀಲ್. ಸಂಯುಕ್ತ ಪಾಟೀಲ್ ಅವರ ದೊಡ್ಡಪ್ಪನ ಮಗ. ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿ ರಾಷ್ಟ್ರ ಕಟ್ಟುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ಬಿಜೆಪಿ ಸೇರುವುದು ಬಹಳ ವರ್ಷದ ಕನಸಾಗಿತ್ತು ಎಂದು ಹರ್ಷಗೌಡ ಪಾಟೀಲ್ ಹೇಳಿದ್ದಾರೆ.

ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರವಾಗಿ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ಷಗೌಡ ಪಾಟೀಲ್, ಪಕ್ಷದ ಕಾರ್ಯಕರ್ತನಾಗಿ ಸೇರಿಕೊಂಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ ಎಂದಿದ್ದಾರೆ. ಈ ಮೂಲಕ ತಂಗಿಯ ವಿರುದ್ಧ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ.
ಕಡಿಮೆಯಾಗಿಲ್ಲ ವೀಣಾ ಕಾಶಪ್ಪನವರ್ ಅಸಮಾಧಾನ!
ಹುನುಗುಂದ ಕಾಂಗ್ರೆಸ್ ಶಾಸಕ ವಿಜಯನಾಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಈ ಬಾರಿ ಟಿಕೆಟ್‌ಗಾಗಿ ಬೇಡಿಕೆಯಿಟ್ಟಿದ್ದರು. ಆದರೆ, ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಾಧ್ಯಮದವರ ಮುಂದೆಯೇ ಕಣ್ಣೀರು ಹಾಕಿದ್ದ ಅವರು ಪಕ್ಷದ ಮೇಲೆ ಅಸಮಾಧಾನಗೊಂಡಿದ್ದಾರೆ. ಯಾವಾಗ ಬೇಕಾದರೂ ಸಿಡಿದೇಳುವಂತೆ ಕಾಣುತ್ತಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಸಂಧಾನಕ್ಕೆ ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ವೀಣಾ ಕಾಶಪ್ಪನವರ್ ಚುನಾವಣಾ ಪ್ರಚಾರದಲ್ಲಿ ತಿಡಗಿಸಿಕೊಳ್ಳುತ್ತಾರೆ ಎಂದಿದ್ದರು. ಆದರೆ, ಹೊಸ ಬೆಳವಣಿಯ ಪ್ರಕಾರ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಸಂದೇಶ ಕಳುಹಿಸಿರುವ ವೀಣಾ ಕಾಶಪ್ಪನವರ್, ಪ್ರಚಾರದಲ್ಲಿ ಭಾಗಿಯಾಗಲ್ಲ ಎಂದು ಸಂದೇಶ ನೀಡಿದ್ದಾರೆ. ಹೀಗಾಗಿ ಸಂಯುಕ್ತಾ ಪಾಟೀಲ್ ಬಿಜೆಪಿ ವಿರುದ್ಧ ಸೆಣೆಸಾಡುವ ಮುನ್ನ ತನ್ನ ಪಕ್ಷದ ಬಂಡಾಯಗಾರರು ಮತ್ತು ಕುಟುಂಬದ ಬಂಡಾಯಗಾರರ ಜೊತೆಗೆ ಹೋರಾಡಬೇಕಿದೆ.












Click it and Unblock the Notifications