ತಾಕತ್ ಇದ್ರೆ ಪುನಃ ಗೆದ್ದು ಬರಲಿ:ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು

ಬಾಗಲಕೋಟೆ, ಮಾರ್ಚ್ 09: ಸಚಿವ ಎಚ್.ಡಿ.ರೇವಣ್ಣ ಸುಮಲತಾ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಕೂಡಲೇ ಅವರು ಬಹಿರಂಗವಾಗಿ ಸುಮಲತಾ ಅವರಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ತೆನೆ ಹೊತ್ತ ಮಹಿಳೆಯ ಜೆಡಿಎಸ್ ಪಕ್ಷದ ಚಿಹ್ನೆಯನ್ನು ಬದಲಿಸಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಚಿವ ಎಚ್.ಡಿ.ರೇವಣ್ಣ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಹಿಳಾ ಕುಲಕ್ಕೆ ಅವಮಾನ ಮಾಡಿದಂತಾಗಿದೆ.ಹೀಗಾಗಿ ರೇವಣ್ಣ ಸುಮಲತಾ ಅವರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತಮ್ಮ ಪಕ್ಷಕ್ಕೆ ತೆನೆಹೊತ್ತ ಮಹಿಳೆ ಚಿಹ್ನೆ ಹಾಕುವ ಅರ್ಹತೆ ದೇವೇಗೌಡರಿಗಿಲ್ಲ.
ಚಿಹ್ನೆ ಕಿತ್ತು ಬಿಸಾಕಬೇಕು ಎಂದು ಆಗ್ರಹಿಸಿದರು.
ಲೋಕಸಭೆ ಚುನಾವಣೆ 2019:ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಸುಮಲತಾ ಡ್ರಾಮಾ ಮಾಡ್ತಿದ್ದಾರೆ ಅಂತಾರೆ ರೇವಣ್ಣ, ಆದರೆ ರೇವಣ್ಣ ಮಾಡುತ್ತಿರೋದು ಏನು? ಎಂದ ಈಶ್ವರಪ್ಪ, ಸುಮಲತಾ ಕಣ್ಣೀರು ಹಾಕ್ತಿರೋದಕ್ಕೆ ಇಡೀ ರಾಜ್ಯವೇ ಮರುಗುತ್ತಿದೆ ಎಂದರು.
ದೇವೇಗೌಡರನ್ನು ಒಕ್ಕಲಿಗರು ತಮ್ಮ ನಾಯಕ ಎಂದು ಒಪ್ಪಿಕೊಳ್ಳಬಾರದು. ಒಂದು ವೇಳೆ ದೇವೇಗೌಡರಿಗೆ 28 ಮಕ್ಕಳಿದ್ದಿದ್ದರೆ, 28 ಕ್ಷೇತ್ರಕ್ಕೂ ಅಭ್ಯಥಿ೯ಗಳು ಇರುತ್ತಿದ್ದರು. ಹೀಗಾಗಿ ತಮಗೆ 28 ಮಕ್ಕಳು ಹುಟ್ಟಲಿಲ್ವಲ್ಲಾ ಎಂದು ದೇವೇಗೌಡ್ರು ಯೋಚಿಸುತ್ತಿರಬಹುದು ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಇನ್ಮುಂದೆ ಅದು ಅಸಾಧ್ಯ
ದೇವೇಗೌಡರಿಗೆ ಕೊನೆಗೆ 14 ಮಕ್ಕಳಿದ್ರೂ 14 ಕ್ಷೇತ್ರ ಮಕ್ಕಳಿಗೆ, ಉಳಿದ 14 ಕ್ಷೇತ್ರದಲ್ಲಿ ಸೊಸೆಯಂದಿರಿಗೆ ಚುನಾವಣಾ ಕಣಕ್ಕಿಳಿಸುತ್ತಿದ್ದರು.38 ಸೀಟು ಬಂದ್ರೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬಹುದು ಅನ್ನೋ ವಿಶ್ವಾಸದಲ್ಲಿ ದೇವೇಗೌಡರು ಇದ್ದಾರೆ. ಇನ್ಮುಂದೆ ಅದು ಅಸಾಧ್ಯ ಎಂದು ಈಶ್ವರಪ್ಪ ಟೀಕಿಸಿದರು.

ಕುಂಕುಮದ ಪಾವಿತ್ರ್ಯತೆ ಗೊತ್ತಿಲ್ಲ
ನಾಮ ಹಚ್ಚುವ ಕೆಲವರು ಕ್ರಿಮಿನಲ್ ಗಳೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ದರಾಮಯ್ಯಗೆ ಕುಂಕುಮದ ಪಾವಿತ್ರ್ಯತೆ ಗೊತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದೇವೇಗೌಡ ನಾಮ ಹಚ್ಚಿಕೊಳ್ಳುತ್ತಾರೆ. ಹಾಗಾದರೆ ಇವರೆಲ್ಲಾ ಕ್ರಿಮಿನಲ್ ಗಳಾ? ಸಿದ್ದರಾಮಯ್ಯ ಕೂಡ ಬಾದಾಮಿಯಲ್ಲಿ ದೇವಿ ದರ್ಶನಕ್ಕೆ ಹೋದಾಗ ನಾಮ ಹಚ್ಚಿಕೊಂಡಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯನೂ ಕ್ರಿಮಿನಲ್ ಎಂದು ಜರಿದರು.
ತಿಲಕವಿಟ್ಟವರೆಂದರೆ ಭಯ: ಸಿದ್ದರಾಮಯ್ಯಗೆ ಮಹಿಳೆಯರಿಂದ ಭರ್ಜರಿ ಗಿಫ್ಟ್

ಏನೇನೋ ಮಾತನಾಡುತ್ತಿದ್ದಾರೆ
ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತ ಬಳಿಕ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಟೀಕೆಗಾಗಿ ಪವಿತ್ರ ತಿಲಕ, ನಾಮದ ಬಗ್ಗೆ ಮಾತನಾಡಬೇಡಿ. ಸಿದ್ದರಾಮಯ್ಯಗೆ ತಿಲಕ, ಸೀರೆ,ಬಳೆಯಲ್ಲೂ ಬಿಜೆಪಿ ಕಾಣ್ತಿದೆ. ಸಿದ್ದರಾಮಯ್ಯ ಕನಕದಾಸರ ರಕ್ತ ಹಂಚಿಕೊಂಡು ಹುಟ್ಟಿದವರು. ನೀವು ಕನಕದಾಸರ ಕುಲದಲ್ಲಿ ಹುಟ್ಟಿದ್ದೀರಿ. ಕನಕದಾಸ, ಸಂಗೊಳ್ಳಿ ರಾಯಣ್ಣ ಬಹಳ ಚಂದವಾಗಿ ಕುಂಕುಮ ಹಚ್ಚಿಕೊಂಡಿದ್ರು ಇದರಿಂದಾಗಿ ಸಿದ್ದರಾಮಯ್ಯ ಇವರಿಗೂ ಅಪಮಾನ ಮಾಡಿದಂತೆ ಎಂದರು ಈಶ್ವರಪ್ಪ.

ರಾಜಕೀಯ ಸನ್ಯಾಸತ್ವ ಸ್ವೀಕರಿಸ್ತೀನಿ
ಸಿದ್ದರಾಮಯ್ಯ ಬಾಗಲಕೋಟೆಗೆ ನಿಲ್ಲಲಿ, ನಾವು ಗೆದ್ದು ತೋರಸ್ತೀವಿ. ನನಗೆಂದೂ ಲೋಕಸಭೆಗೆ ನಿಲ್ಲೋಕೆ ಆಸಕ್ತಿ ಇಲ್ಲ. ಬಾಗಲಕೋಟೆ ಬಿಜೆಪಿ ಭದ್ರಕೋಟೆಯಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಲಿ, ನಾನು ಶಿವಮೊಗ್ಗ ಕ್ಷೇತ್ರಕ್ಕೆ ರಾಜೀನಾಮೆ ನೀಡ್ತೇನೆ. ತಾಕತ್ ಇದ್ರೆ ಪುನಃ ಗೆದ್ದು ಬರಲಿ. ಸಿದ್ದರಾಮಯ್ಯ ಮತ್ತೆ ಬಾದಾಮಿಯಲ್ಲಿ ಗೆದ್ದರೆ ಅಥವಾ ನಾನೂ ಶಿವಮೊಗ್ಗ ಕ್ಷೇತ್ರದಲ್ಲಿ ಸೋತರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸ್ತೀನಿ ಎಂದು ಈಶ್ವರಪ್ಪ ಸವಾಲು ಹಾಕಿದರು.