ಬಾದಾಮಿಯಲ್ಲಿ ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಬಾಗಲಕೋಟೆ, ಜುಲೈ.16: ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಐತಿಹಾಸಿಕ ಕೇಂದ್ರ ಮಹಾಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.
ಮಹಾಕೂಟೇಶ್ವರ ದೇವಾಲಯದ ಪಕ್ಕದಲ್ಲಿಯೇ ಇರುವ ಪುಷ್ಕರಣಿಯಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿ, ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದ ಕೈಮಾಕ್ಸ್ ಹಂತದ ಶೂಟಿಂಗ್ ಐದು ದಿನಗಳ ಕಾಲ ನಡೆಸಲಾಗುತ್ತಿದೆ.
ರಾತ್ರಿ 9 ಗಂಟೆಯಿಂದ ಪ್ರಾರಂಭವಾದ ಶೂಟಿಂಗ್ ಬೆಳಗಿನ ಜಾವ 5 ಗಂಟೆಯವರೆಗೆ ಮಾಡಲಾಗುತ್ತಿದ್ದು, ನಟಿ ರಚಿತಾ ರಾಮ್ ಜೊತೆಗೆ ಕೊನೆಯ ಸೀನ್ ಚಿತ್ರೀಕರಣ ಮಾಡಲಾಗುತ್ತಿದೆ. ಪವನ ಒಡೆಯರ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರೀಕರಣವನ್ನು ಇಡೀ ರಾತ್ರಿ ಮಾಡುತ್ತಿರುವುದು ವಿಶೇಷವಾಗಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಪುಷ್ಕರಣಿಯಲ್ಲಿ ವಿವಿಧ ರೀತಿಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ರಾತ್ರಿ ಇಡೀ ಶೂಟಿಂಗ್ ನಲ್ಲಿ ಪಾಲ್ಗೊಂಡ ಪುನೀತ್ ಬಾದಾಮಿಯ ಕೃಷ್ಣ ಹೇರಿಟಿಜ್ ಹೋಟೆಲ್ ನಲ್ಲಿ ತಂಗಿದ್ದಾರೆ.
ಹೋಟೆಲ್ ಬಳಿ ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

ಮಹಾಕೂಟದಲ್ಲಿ ಈ ಹಿಂದೆ ಬಾಲಿವುಡ್ ನಟಿ ಐಶ್ವರ್ಯ ರೈ ಅಭಿನಯದ 'ಗುರು' ಚಿತ್ರದ ಹಾಡಿನ ದೃಶ್ಯಾವಳಿ ಸಹ ಇದೇ ಪುಷ್ಕರಣಿಯಲ್ಲಿ ಸೆರೆ ಹಿಡಿಯಲಾಗಿತ್ತು. ಈಗ ಕನ್ನಡದ ಶ್ರೇಷ್ಠ ನಟ ಪುನೀತ್ ಅಭಿನಯದ 'ನಟಸಾರ್ವಭೌಮ' ಚಿತ್ರೀಕರಣ ನಡೆಸುತ್ತಿರುವುದು ವಿಶೇಷವಾಗಿದೆ.
ರಾತ್ರಿ ಶೂಟಿಂಗ್ ಇರುವುದರಿಂದ ಮಾಧ್ಯಮದವರಿಗೆ ಹಾಗೂ ಇತರ ವ್ಯಕ್ತಿಗಳಿಗೂ ಪ್ರವೇಶ ನಿರ್ಬಂಧ ಹೇರಲಾಗಿದೆ.

ಇದೀಗ ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.












Click it and Unblock the Notifications