ನಿಖಿಲ್ ಸೋಲಿಸಲೆಂದೇ ಬಿಜೆಪಿ ಸುಮಲತಾಗೆ ಬೆಂಬಲ ನೀಡಿದೆ:ಈಶ್ವರಪ್ಪ
ಬಾಗಲಕೋಟೆ, ಏಪ್ರಿಲ್ 08: ಹೆಲಿಕಾಪ್ಟರ್ ಲಭ್ಯವಾಗದಂತೆ ಬಿಜೆಪಿಯಿಂದ ಕುತಂತ್ರ ನಡೆದಿದೆ ಎಂಬ ಹೆಚ್ ಡಿಕೆ ಹೇಳಿಕೆಗೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರ ಈ ಹೇಳಿಕೆ ಹಾಸ್ಯಾಸ್ಪದ. ಪ್ರಚಾರದ ಬಗ್ಗೆ ತಾವು ಮೊದಲೇ ಎಲ್ಲವನ್ನು ಸಿದ್ದ ಪಡಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಹೇಳೋದು ಸರಿಯಲ್ಲ ಎಂದು ತಿಳಿಸಿದರು.
ನನ್ನ ಮಗನ ಸೋಲಿಸೋದರ ಮೂಲಕ ನನ್ನ ರಾಜಕೀಯ ಮುಗಿಸಲು ಸಂಚು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅದು ಸಂಚಲ್ಲ, ರಾಜಕೀಯ. ನಿಖಿಲ್ ಸೋಲಿಸೋದಕ್ಕಾಗಿಯೇ ಬಿಜೆಪಿ ಸುಮಲತಾಗೆ ಬೆಂಬಲ ನೀಡಿದೆ. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಂದಾಣಿಕೆಯಿಲ್ಲ.ಅವರನ್ನು ಇವರು, ಇವರನ್ನು ಅವರು ಸೋಲಿಸೋಕೆ ನಿಂತಿದ್ದಾರೆ ಎಂದರು.

ಮಂಡ್ಯ ಬಗ್ಗೆ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಸೋಲಿನ ಭೀತಿಯಿಂದ ಇಡೀ ಕುಟುಂಬ ಪ್ರಚಾರ ಮಾಡುತ್ತಿದೆ.ಸಾಲದೆಂಬಂತೆ ಸಿದ್ದರಾಮಯ್ಯನವರನ್ನು ಪ್ರಚಾರಕ್ಕೆ ಕರೆದಿದ್ದಾರೆ. ಸೋಲಿನ ಭೀತಿಯಿಂದ ರಾಹುಲ್ ಕರೆಸುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.
ಆರ್ ಎಸ್ ಎಸ್ ಹಿಂದುತ್ವವನ್ನು ಬೆಳೆಸುತ್ತಿದೆ. ಹಿಂದುತ್ವದ ಬಗ್ಗೆ ಗುಂಡೂರಾವ್ ಗೆ ಗೊತ್ತಿಲ್ಲ ಎಂದ ಈಶ್ವರಪ್ಪ, ಗುಂಡೂರಾವ್ ಮುಸ್ಲಿಂ ಸಮುದಾಯದ ಹೆಣ್ಣು ಮಗಳನ್ನು ಮದುವೆಯಾಗಿದ್ದಾರೆ.
ಅವರು ನನ್ನ ಸಹೋದರಿ ಇದ್ದ ಹಾಗೆ. ಆ ಬಗ್ಗೆ ಮಾತಾಡೋದಿಲ್ಲ. ಆದರೆ ದಿನೇಶ್ ಗುಂಡೂರಾವ್ ಗೆ ಆರ್ ಎಸ್ಎಸ್ ಬಗ್ಗೆ ಗೊತ್ತಿಲ್ಲ ಎಂದು ಗರಂ ಆದರು.












Click it and Unblock the Notifications