ಹುನಗುಂದ: ಬಂಡಾಯದ ಬಾವುಟ ಹಾರಿಸಿದ ಬಿಜೆಪಿಯ ನವಲಿ ಹಿರೇಮಠ
ಹುನಗುಂದ, ಏಪ್ರಿಲ್ 20: ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ದೊರಕದೆ ನಿರಾಶೆಗೊಂಡಿರುವ ಮುಖಂಡ ಎಸ್.ಆರ್. ನವಲಿ ಹಿರೇಮಠ್ ಅವರು ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ನೂರಾರು ಅಭಿಮಾನಿಗಳ ಜತೆ ಮೆರವಣಿಗೆಯಲ್ಲಿ ತೆರಳಿದ ನವಲಿ ಹಿರೇಮಠ್ ಅವರಿಗೆ ಚಿತ್ರ ನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿ ಮಾತನಾಡಿದ ನವಲಿ ಹಿರೇಮಠ್, ಭಾರತೀಯ ಜನತಾ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರಿಕೊಂಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ ಹಾಗೂ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಅಭಿಲಾಷೆ ನನ್ನದಾಗಿತ್ತು. ಟಿಕೆಟ್ ಸಿಗಲಿದೆ ಎಂಬ ಭರವಸೆಯೊಂದಿಗೆ ಬಿಜೆಪಿ ಪ್ರವೇಶಿಸಿದ್ದೆ. ಆದರೆ ನನಗೆ ಟಿಕೆಟ್ ದೊರಕದೆ ಇರುವುದಕ್ಕೆ ಕಾರಣ ತಿಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವಿವಿಧ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸಿದ್ದೇನೆ. ಬಿಜೆಪಿ ಅಭ್ಯರ್ಥಿಗಳ ಗೆಲ್ಲುವಿಕೆಗಾಗಿ ಸಾಕಷ್ಟು ಶ್ರಮ ವಹಿಸಿದ್ದೇನೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ನಾನು ತೆರೆಮರೆಯಲ್ಲೇ ಉಳಿದುಕೊಳ್ಳುತ್ತಿದ್ದೆ. ಅದೀಗ ಸಾಕಾಗಿದೆ. ಹೀಗಾಗಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಿ ಶಕ್ತಿಮೀರಿ ಕಾರ್ಯ ನಿರ್ವಹಿಸಲಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಹೀಗಾಗಿ ಹುನಗುಂದ ಮತಕ್ಷೇತ್ರ ಜನರು ನನ್ನ ಗೆಲುವಿಗೆ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಪ್ರೇಮ್ ಮಾತನಾಡಿ, ಎಸ್.ಆರ್ ನವಲಿ ಹಿರೇಮಠ್ ಅವರು ನನ್ನ ಸ್ನೇಹಿತರು. ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಇಂತಹ ಅಭ್ಯರ್ಥಿಗಳು ಗೆಲ್ಲಬೇಕಾಗಿದೆ ಎಂದರು.












Click it and Unblock the Notifications