'ನಾನು ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್'': ನಟಿ ರೋಜಾ
Recommended Video
ಅಮರವಾತಿ, ಮೇ 26: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.
ಜಗನ್ಮೋಹನ್ ರೆಡ್ಡಿಯವರ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷದಿಂದ ನಗರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ರೋಜಾ ಅವರು ರೋಚಕ ಗೆಲುವು ಸಾಧಿಸಿದ ಬಳಿಕ ಮಾತನಾಡಿ, ನಾನು ಪಕ್ಷಕ್ಕೆ 'ಐರನ್ ಲೆಗ್' ದುರಾದೃಷ್ಟವಂತೆ ಎಂದು ಜರೆಯಲಾಗಿತ್ತು. ಆದರೆ, ನಾನು 'ಗೋಲ್ಡನ್ ಲೆಗ್' ಅದೃಷ್ಟವಂತೆ ಎಂದು ಸಾಬೀತು ಮಾಡಿದ್ದೇನೆ ಎಂದಿದ್ದಾರೆ.
2009ರಲ್ಲಿ ತೆಲುಗುದೇಶಂ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದ ರೋಜಾ ಅವರು ಆ ವರ್ಷ ಸೋಲು ಕಂಡಿದ್ದರಿಂದ 'ಐರನ್ ಲೆಗ್ ' ಎಂದು ಎಲ್ಲರೂ ಜರೆದಿದ್ದರು. ನಂತರ ತೆಲುಗುದೇಶಂ ಪಕ್ಷವನ್ನು ಆಗಸ್ಟ್ 2009ರಲ್ಲಿ ತೊರೆದು ತಕ್ಷಣವೇ ವೈಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಕಳೆದ ವಿಧಾನಸಭಾ ಚುನಾವಣೆಯಂತೆಯೇ, ಈ ಬಾರಿಯೂ ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ಕಂಡಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ನಿಂತಿದ್ದ ಗಾಲಿ ಭಾನು ಪ್ರಕಾಶ್ ವಿರುದ್ಧ ರೋಜಾ ಬರೀ 2,630 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
2014 ರಲ್ಲಿ ಟಿಡಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣಂ ನಾಯ್ಡು ವಿರುದ್ಧ ಕೇವಲ 858 ಮತಗಳ ಅಂತರದಲ್ಲಿ ರೋಜಾ ಗೆದ್ದಿದ್ದರು. ಈ ಬಾರಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಆಡಳಿತ ವಿರೋಧಿ ಅಲೆ, ಜಗನ್ ಮೋಹನ್ ರೆಡ್ಡಿ ಆಶ್ವಾಸನೆ ಎಲ್ಲವೂ ವರ್ಕ್ ಔಟ್ ಆಗಿದೆ. ಸಿಂಗುಂದರ್ ಪ್ರದೇಶದಲ್ಲಿ ತಮಿಳು ಭಾಷಿಕರು ಹೆಚ್ಚಾಗಿದ್ದು, ರೋಜಾ ಅವರ ತಮಿಳು ಮೂಲ ಕೂಡಾ ಗೆಲುವಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications