ಗಿರ್ ಅರಣ್ಯದಲ್ಲಿ ಸಿಂಹ ನೋಡಲೂ ವೀಸಾ ಬೇಕಾಗುತ್ತಿತ್ತು: ಮೋದಿ
ಅಹ್ಮದಾಬಾದ್, ಅಕ್ಟೋಬರ್ 31: "ಸರ್ದಾರ್ ವಲ್ಲಭಬಾಯಿ ಪಟೇಲ್ ಅಂದು ಅಂಥ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದರೆ ಇಂದು ನಾವು ಗಿರ್ ಅರಣ್ಯದಲ್ಲಿ ಸಿಂಹ ನೋಡುವುದಕ್ಕೆ ವೀಸಾ ಬೇಕಾಗುತ್ತಿತ್ತು" ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಮಿಕವಾಗಿ ಹೇಳಿದರು.
ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಅವರು ಮಾತನಾಡುತ್ತಿದ್ದರು.
ಗುಜರಾತಿನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ನಿರ್ಮಿಸಲಾದ ಸರ್ದಾರ್ ಪಟೇಲ್ ಅವರ 182 ಮೀ. ಎತ್ತರದ ಪ್ರತಿಮೆ ವಿಶ್ವದಲ್ಲೇ ಅತೀ ಎತ್ತರದ್ದು ಎಂಬ ಖ್ಯಾತಿ ಪಡೆದಿದೆ.
ಅ.31 ರಂದು ಪಟೇಲ್ ಅವರ 143 ನೇ ಜನ್ಮದಿನದಂದು ಈ ಪ್ರತಿಮೆಯನ್ನು ಅನಾವರಣಗೊಳಿಸಿದ ಮೋದಿ, ನಂತರ ಮಾಡಿದ ಭಾಷಣದ ಮುಖ್ಯಾಂಶ ಇಲ್ಲಿದೆ.

ಗಿರ್ ಅರಣ್ಯಕ್ಕೆ ಹೋಗುವುದಕ್ಕೂ ವೀಸಾ!
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತದ ವಿವಿಧ ರಾಜಮನೆತನಗಳನ್ನು ಒಗ್ಗೂಡಿಸುವ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದರೆ ಇಂದು ನಾವು ಗಿರ್ ಅರಣ್ಯದಲ್ಲಿ ಸಿಂಹ ನೋಡುವುದಕ್ಕೆ, ಸೋಮನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವುದಕ್ಕೆ ಮತ್ತು ಹೈದರಾಬಾದಿನ ಚಾರ್ ಮಿನಾರ್ ನೋಡುವುದಕ್ಕೆ ವೀಸಾ ಬೇಕಾಗುತ್ತಿತ್ತು- ನರೇಂದ್ರ ಮೋದಿ

ಪಟೇಲ್ ರನ್ನು ನೆನಪಿಸಿಕೊಳ್ಳುವುದು ಅಪರಾಧವೇ?
ನಮ್ಮದೇ ದೇಶದ ಕೆಲವರು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ನನಗೆ ಅಚ್ಚರಿ ತಂದಿದೆ. ಪ್ರತಿಮೆಯನ್ನು ನಿರ್ಮಿಸಿದ್ದಕ್ಕೆ ನಮ್ಮನ್ನು ಟೀಕಿಸಲಾಗುತ್ತಿದೆ, ನಾವು ಯಾವುದೋ ಅಪರಾಧ ಮಾಡಿದ್ದೇವೆ ಎಂಬಂತೆ ನೋಡಲಾಗುತ್ತಿದೆ. ಈ ದೇಶದ ಮಹಾನ್ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು ಅಪರಾಧವೇ? - ನರೇಂದ್ರ ಮೋದಿ

ಯುವಶಕ್ತಿಯೇ ದೇಶದ ಭವಿಷ್ಯ
ಈ ದೇಶದ ಬಗ್ಗೆ ಯೋಚಿಸುವ ಯುವಶಕ್ತಿಯನ್ನು ನಾವು ಪಡೆದಿದ್ದೇವೆ. ಈ ಶಕ್ತಿ ಮಾತ್ರವೇ ದೇಶದ ಅಭಿವೃದ್ಧಿಗೆ ದಾರಿಯಾಗಬಲ್ಲದು. ಈ ದೇಶದ ಒಗ್ಗಟ್ಟು, ಏಕತೆ, ಸಮಗ್ರತೆ ಮತ್ತು ಸಾರ್ವತ್ರಿಕತೆಯನ್ನು ಉಳಿಸುವುದು ಹೇಗೆ ಎಂಬುದನ್ನು ಸರ್ದಾರ್ ಪಟೇಲ್ ನಮಗೆ ತೋರಿಸಿಕೊಟ್ಟಿದ್ದಾರೆ- ನರೇಂದ್ರ ಮೋದಿ

ಪಟೇಲ್ ಮೇಲಿನ ಗೌರವದ ಪ್ರತೀಕ
ಸರ್ದಾರ್ ಪಟೇಲರ ಈ ಪ್ರತಿಮೆ ಈ ದೇಶದ ಕೋಟ್ಯಂತರ ಜನರಿಗೆ ಪಟೇಲರ ಮೇಲಿರುವ ಗೌರವದ ಪ್ರತೀಕವಾಗಿದೆ. ಇದು ನಮ್ಮ ಶಕ್ತಿ ಮತ್ತು ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ದಾರಿಯಾಗಬಲ್ಲದು. ಇದರಿಂದಾಗಿ ಬುಡಕಟ್ಟು ಜನರೂ ಉದ್ಯೋಗ ಪಡೆಯಬಹುದು- ನರೇಮದ್ರ ಮೋದಿ

ಸಾವಿರಾರು ಜನರ ಪರಿಶ್ರಮ ನೆನೆದ ಮೋದಿ
ಈ ಪ್ರತಿಮೆ ನಮ್ಮ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಪ್ರತೀಕ. ಕಳೆದ ಮೂರುವರೆ ವರ್ಷಗಳಿಂದ ಇಲ್ಲಿ ಕಾರ್ಮಿಕರು ಪ್ರತಿದಿನ ದುಡಿದಿದ್ದಾರೆ. ಡಿಲ್ಪಿ ರಾಮ್ ಸುತಾರ್ ಅವರ ನೇತೃತ್ವದಲ್ಲಿ ಅವರ ತಂಡ ಈ ಅದ್ಭುತ ಕಲಾಕೃತಿಯನ್ನು ನಿರ್ಮಿಸಿದೆ. ಈ ದೇಶದ ಪ್ರಖ್ಯಾತ ಕಲಾವಿದರೂ ಈ ಪ್ರತಿಮೆಯ ಸೃಷ್ಟಿಗೆ ಕೈಜೋಡಿಸಿದ್ದಾರೆ- ನರೇಂದ್ರ ಮೋದಿ

ಭಾರತದ ಅಸ್ತಿತ್ವ ಪ್ರಶ್ನಿಸುವವರಿಗೆ ಇದು ಉತ್ತರ!
ಈ ಪ್ರತಿಮೆಯು ಸರ್ದಾರ್ ಪಟೇಲರಿಗೆ ಭಾರದ ಮೇಲಿದ್ದ ಪ್ರೀತಿಯ ಸಂಕೇತ. ಅವರ ಪ್ರತಿಭೆ, ಅಧ್ಯಾತ್ಮಕತೆ ಎಲ್ಲದರ ದ್ಯೋತಕವಾದ ಈ ಪ್ರತಿಮೆ ಸ್ಫೂರ್ತಿ ನೀಡುತ್ತಿದೆ. ಭಾರತದ ಅಸ್ತಿತ್ವವನ್ನು ಪ್ರಶ್ನಿಸುವವರಿಗೆ ಈ ಪ್ರತಿಮೆಯೇ ಉತ್ತರ. ಈ ದೇಶ ಎಂದೆಂದಿಗೂ ಅಮರ ಎಂಬುದನ್ನು ಈ ಪ್ರತಿಮೆ ಸಾರಿ ಹೇಳಲಿದೆ- ನರೇಂದ್ರ ಮೋದಿ












Click it and Unblock the Notifications