600 ಕೋಟಿ. ರೂ. ವೆಚ್ಚದಲ್ಲಿ ಹೊಸ ಡೈರಿಗೆ ಚಾಲನೆ ನೀಡಿದ ಪಿಎಂ ಮೋದಿ
ದಿಯೋದರ್, ಏಪ್ರಿಲ್ 19: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕದ ಸ್ಥಾಪನೆಗೆ ಚಾಲನೆ ನೀಡಿದ್ದಾರೆ.
ಈ ಹೊಸ ಡೈರಿ ಸಂಕೀರ್ಣವು ಸಂಪೂರ್ಣ ಗ್ರೀನ್‌ಫೀಲ್ಡ್ ಯೋಜನೆಯಾಗಿದೆ. ಇದು ದಿನಕ್ಕೆ ಸುಮಾರು 30 ಲಕ್ಷ ಲೀಟರ್ ಹಾಲು ಸಂಸ್ಕರಣೆ, ಸುಮಾರು 80 ಟನ್ ಬೆಣ್ಣೆ, ಒಂದು ಲಕ್ಷ ಲೀಟರ್ ಐಸ್ ಕ್ರೀಮ್, 20 ಟನ್ ಗಟ್ಟಿಗೊಳಿಸಿದ ಹಾಲು (ಖೋವಾ) ಮತ್ತು 6 ಟನ್ ಚಾಕೊಲೇಟ್ ಅನ್ನು ಉತ್ಪಾದಿಸುತ್ತದೆ. ಆಲೂಗೆಡ್ಡೆ ಸಂಸ್ಕರಣಾ ಘಟಕವು ಫ್ರೆಂಚ್ ಫ್ರೈಸ್, ಆಲೂಗಡ್ಡೆ ಚಿಪ್ಸ್, ಆಲೂ ಟಿಕ್ಕಿ, ಪ್ಯಾಟೀಸ್ ಮುಂತಾವಿವಿಧ ರೀತಿಯ ಸಂಸ್ಕರಿಸಿದ ಆಲೂಗಡ್ಡೆ ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದು ಮೋದಿ ತಿಳಿಸಿದರು.
ಈ ಘಟಕಗಳು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ. ಅಲ್ಲದೆ, ಪ್ರಧಾನಿ ಮೋದಿ ಬನಾಸ್ ಸಮುದಾಯ ರೇಡಿಯೋ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ಒದಗಿಸಲು ಈ ಸಮುದಾಯ ರೇಡಿಯೋ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
|
ಗೋಬರ್ ಗ್ಯಾಸ್ ಘಟಕಕ್ಕೆ ಶಂಕುಸ್ಥಾಪನೆ
ರೇಡಿಯೋ ಕೇಂದ್ರವು ಸುಮಾರು 1700 ಹಳ್ಳಿಗಳ 5 ಲಕ್ಷಕ್ಕೂ ಹೆಚ್ಚು ರೈತರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ. ಇದೇ ವೇಳೆ ಪ್ರಧಾನಿ ಅವರು ಪಾಲನ್‌ಪುರ್‌ನಲ್ಲಿರುವ ಬನಾಸ್ ಡೈರಿ ಘಟಕದ ಚೀಸ್ ಉತ್ಪನ್ನಗಳು ಮತ್ತು ಹಾಲಿನ ಪುಡಿ ಉತ್ಪಾದನೆಗೆ ವಿಸ್ತರಿತ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಲ್ಲದೆ, ಗುಜರಾತ್‌ನ ದಾಮಾದಲ್ಲಿ ಸ್ಥಾಪಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ಘಟಕವನ್ನು ಅವರು ಲೋಕಾರ್ಪಣೆಗೊಳಿಸಿದರು. ಖಿಮಾನ, ರತನ್‌ಪುರ - ಭಿಲ್ಡಿ, ರಾಧನ್‌ಪುರ್ ಮತ್ತು ಥಾವರ್‌ನಲ್ಲಿ 100 ಟನ್ ಸಾಮರ್ಥ್ಯದ ನಾಲ್ಕು ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೂ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.

ಜಾನುವಾರು ಸಾಕಣೆ ಸಮುದಾಯಗಳಿಗೆ ಸಹಾಯ
ಬನಾಸ್ ಡೈರಿ ದೇಶದಲ್ಲಿ ಹೊಸ ಆರ್ಥಿಕ ಶಕ್ತಿಯನ್ನು ಸೃಷ್ಟಿಸಿದೆ ಎಂದ ಪ್ರಧಾನಿ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಒಡಿಶಾ (ಸೋಮನಾಥ್‌ನಿಂದ ಜಗನ್ನಾಥ), ಆಂಧ್ರಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಬನಾಸ್ ಡೈರಿ ಆಂದೋಲನವು ರೈತರಿಗೆ ಮತ್ತು ಜಾನುವಾರು ಸಾಕಣೆ ಸಮುದಾಯಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

ರೈತರ ಆದಾಯ ವೃದ್ಧಿಗೆ ಪೂರಕ
ಇಂದು ಹೈನುಗಾರಿಕೆ ರೈತರ ಆದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು. 8.5 ಲಕ್ಷ ಕೋಟಿ ರೂಪಾಯಿಗಳ ಹಾಲಿನ ಉತ್ಪಾದನೆಯೊಂದಿಗೆ, ಹೈನುಗಾರಿಕೆಯು ಸಾಂಪ್ರದಾಯಿಕ ಆಹಾರ ಧಾನ್ಯಗಳಿಗಿಂತ ರೈತರ ಆದಾಯ ವೃದ್ಧಿಗೆ ವಿಶೇಷವಾಗಿ ಸಣ್ಣ ಭೂ ಹಿಡುವಳಿದಾರರು ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರಿಗೆ ದೊಡ್ಡ ವಿಧಾನವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಹಿಂದಿನ ಪ್ರಧಾನಿ ವಿವರಿಸಿದ್ದಂತೆ ಈ ಹಿಂದೆ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತಿತ್ತು, ಆದರೆ ಪರಿಸ್ಥಿತಿ ಮೊದಲಿಗಿಂತ ಭಿನ್ನವಾಗಿ ಈಗ ಫಲಾನುಭವಿಗಳಿಗೆ ಸಂಪೂರ್ಣ ಪ್ರಯೋಜನಗಳು ತಲುಪುತ್ತಿವೆ ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ವರ್ಷ
ರೈತರು ನೈಸರ್ಗಿಕ ಕೃಷಿಯತ್ತ ತಮ್ಮ ಗಮನವನ್ನು ಹರಿಸುವಂತೆ ಪುನರುಚ್ಚರಿಸಿದ ಪ್ರಧಾನಿ ಮೋದಿ, ಬನಸ್ಕಾಂತದ ನೀರಿನ ಸಂರಕ್ಷಣೆ ಮತ್ತು ಹನಿ ನೀರಾವರಿ ಪದ್ದತಿಯನ್ನು ಸ್ಮರಿಸಿದರು. ನೀರನ್ನು 'ಪ್ರಸಾದ' ಮತ್ತು ‘ಚಿನ್ನ' ಎಂದು ಪರಿಗಣಿಸುವ ನೀವು, 2023ರ ಸ್ವಾತಂತ್ರ್ಯ ದಿನದ ವೇಳೆಗೆ ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ 75 ಭವ್ಯ ಸರೋವರಗಳನ್ನು ನಿರ್ಮಿಸಬೇಕು ಎಂದು ಮೋದಿ ಕರೆ ನೀಡಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications