ಕೊರೊನಾ ಲಸಿಕೆ ಪಡೆದ ಕೆಲವೇ ಗಂಟೆಗಳಲ್ಲಿ ಕಾರ್ಮಿಕ ಸಾವು!?
ಅಹ್ಮದಾಬಾದ್, ಫೆಬ್ರವರಿ.01: ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡ 30 ವರ್ಷದ ಸ್ಯಾನಿಟೈಸಿಂಗ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ. ದೇಶದಲ್ಲಿ ಈವರೆಗೂ ಕೊವಿಡ್-19 ಲಸಿಕೆ ನಂತರದಲ್ಲಿ ಪ್ರಾಣ ಬಿಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ವಡೋದರಾ ಮಹಾನಗರ ಪಾಲಿಕೆಯಲ್ಲಿ ಸ್ಯಾನಿಟೈಸಿಂಗ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ 30 ವರ್ಷದ ಜಿಗ್ನೇಶ್ ಸೋಲಂಕಿ ಅವರಿಗೆ ಭಾನುವಾರ ಕೊರೊನಾವೈರಸ್ ಲಸಿಕೆ ನೀಡಲಾಗಿತ್ತು. ಈ ಲಸಿಕೆ ನೀಡಿ ಕೆಲವೇ ಹೊತ್ತಿನಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಜಿಗ್ನೇಶ್ ಸೋಲಂಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಸಿಬ್ಬಂದಿಯ ಸಾವಿಗೆ ನಿಜವಾಗಿಯೂ ಕೊರೊನಾವೈರಸ್ ಲಸಿಕೆಯೇ ಕಾರಣವೇ ಅಥವಾ ಬೇರೆ ಆರೋಗ್ಯ ಸಮಸ್ಯೆಗಳಿದ್ದವೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮೃತರ ಪತ್ನಿ ಲಸಿಕೆಯಿಂದಲೇ ತಮ್ಮ ಪತ್ನಿ ಮೃತಪಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

"ಕೊವಿಡ್-19 ಲಸಿಕೆಯಿಂದಲೇ ನನ್ನ ಪತಿ ಸಾವು"
"ನನ್ನ ಪತಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ಅವರು ಅದರ ಬಗ್ಗೆ ನನ್ನ ಜೊತೆಗೆ ಚರ್ಚಿಸಿರಲಿಲ್ಲ. ಲಸಿಕೆ ಹಾಕಿಸಿಕೊಂಡು ಮನೆಗೆ ವಾಪಸ್ಸಾಗಿ ಅವರು, ಮಗಳ ಜೊತೆಗೆ ಚನ್ನಾಗಿ ಆಟವಾಡಿಕೊಂಡಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಎದೆನೋವು ಕಾಣಿಸಿಕೊಂಡಿತು. ಈ ರೀತಿ ಅವರ ದಿಢೀರ್ ಸಾವಿಗೆ ಕೊರೊನಾವೈರಸ್ ಲಸಿಕೆಯೇ ಕಾರಣ" ಎಂದು ಮೃತ ಜಿಗ್ನೇಶ್ ಸೋಲಂಕಿ ಅವರ ಪತ್ನಿ ದಿವ್ಯಾ ಆರೋಪಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡ ಕೇಂದ್ರದಲ್ಲಿ ಅರ್ಧಗಂಟೆ ಪರಿಶೀಲನೆ
ಕೊರೊನಾವೈರಸ್ ಲಸಿಕೆ ಹಾಕಿದ ನಂತರದಲ್ಲಿ ಜಿಗ್ನೇಶ್ ಸೋಲಂಕಿ ಅವರನ್ನು ಲಸಿಕೆ ಕೇಂದ್ರದಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಅರ್ಧ ಗಂಟೆಗಳವರೆಗೂ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದರು. ಈ ಅವಧಿಯಲ್ಲಿ ಜಿಗ್ನೇಶ್ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಕೊರೊನಾ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಾಗಿಲ್ಲ ಎಂದು ಖಾತ್ರಿಪಡಿಸಿಕೊಂಡ ನಂತರವೇ ಅವರನ್ನು ಲಸಿಕೆ ಕೇಂದ್ರದಿಂದ ಕಳುಹಿಸಿ ಕೊಡಲಾಗಿತ್ತು ಎಂದು ಎಸ್ಎಸ್ ಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಜನ್ ಅಯ್ಯರ್ ತಿಳಿಸಿದ್ದಾರೆ.

"ಜಿಗ್ನೇಶ್ ಸಾವಿಗೆ ಹೃದಯ ಸಂಬಂಧಿ ಕಾಯಿಲೆ ಕಾರಣ"
ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಜಿಗ್ನೇಶ್ ಸೋಲಂಕಿ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಸಮಸ್ಯೆ ಹೊಂದಿದ್ದರೂ ಅವರು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆ ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಎಸ್ಎಸ್ ಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಜನ್ ಅಯ್ಯರ್ ತಿಳಿಸಿದ್ದಾರೆ.

ಆರೋಗ್ಯದ ಹಿನ್ನೆಲೆ ಬಗ್ಗೆ ತಿಳಿಸದೇ ಲಸಿಕೆ ಹಾಕಿಸಿಕೊಂಡ ಆರೋಪ
ಸ್ಯಾನಿಟೈಸರ್ ಸಿಬ್ಬಂದಿ ಜಿಗ್ನೇಶ್ ಸೋಲಂಕಿ ಅವರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದವು. ಆದರೆ ಈ ಬಗ್ಗೆ ಮಾಹಿತಿ ನೀಡದೇ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಮೊದಲೇ ಈ ಬಗ್ಗೆ ತಿಳಿಸಿದ್ದರೆ ಮಾರ್ಗಸೂಚಿಯಂತೆ ಅವರಿಗೆ ಲಸಿಕೆಯನ್ನೇ ನೀಡುತ್ತಿರಲಿಲ್ಲ. ವಡೋದರಾ ಜಿಲ್ಲೆಯಲ್ಲಿ 12,000ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ ಗೆ ಲಸಿಕೆಯನ್ನು ನೀಡಲಾಗಿದ್ದು, ಇದುವರೆಗೂ ಅಡ್ಡಪರಿಣಾಮದ ಬಗ್ಗೆ ಒಂದೇ ಒಂದು ಪ್ರಕರಣಗಳು ಗೋಚರಿಸಿಲ್ಲ ಎಂದು ಎಸ್ಎಸ್ ಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಜನ್ ಅಯ್ಯರ್ ಹೇಳಿದ್ದಾರೆ.












Click it and Unblock the Notifications